ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮೈಸೂರು ವಿಶ್ವವಿದ್ಯಾಲಯ ನಡೆಸಿದ ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ-ಸೆಟ್)ಯ ತಾತ್ಕಾಲಿಕ ಕೀ ಉತ್ತರ ಪ್ರಕಟಿಸಿದ್ದು, ಆಕ್ಷೇಪಣೆ ಸಲ್ಲಿಸಿಲು ಒಂದು ಪ್ರಶ್ನೆಗೆ 1 ಸಾವಿರ ರೂ. ನಿಗದಿ ಮಾಡಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ತಾತ್ಕಾಲಿಕ ಕೀ ಉತ್ತರಕ್ಕೆ ಆಕ್ಷೇಪಣೆ ಸಲ್ಲಿಸಬೇಕೆಂದಿರುವ ಅಭ್ಯರ್ಥಿಗಳು ಕೂಡ ದುಬಾರಿ ಶುಲ್ಕಕ್ಕೆ ಬೆಚ್ಚಿಬಿದ್ದು, ಆಕ್ಷೇಪಣೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ.
ಕೆ-ಸೆಟ್ ಪರೀಕ್ಷೆಯ ತಾತ್ಕಾಲಿಕ ಕೀ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ತಾವು ಬರೆದಿರುವ ಉತ್ತರ ಹಾಗೂ ಕೀ ಉತ್ತರಕ್ಕೆ ತಾಳಿ ಮಾಡಿ ನೋಡಬಹುದು. ಯಾವುದೇ ಆಕ್ಷೇಪಣೆಗಳಿದ್ದರೂ ಸಲ್ಲಿಸಬಹುದು. ಒಂದು ಪ್ರಶ್ನೆಗೆ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆಯನ್ನು ಅ.19ರೊಳಗೆ ಸಲ್ಲಿಸಬೇಕು. ಅಭ್ಯರ್ಥಿಯು ಆಕ್ಷೇಪಣೆ ಸಲ್ಲಿಸಿದ್ದು ಸರಿಯಾಗಿದ್ದರೆ ಶುಲ್ಕದ ಮೊತ್ತವನ್ನು ಮರುಪಾವತಿ ಮಾಡಲಾಗುತ್ತದೆ. ಆಕ್ಷೇಪಣೆಗಳನ್ನು ಸ್ವೀಕರಿಸಿ ಪರಿಶೀಲಿಸಿ, ಅಂತಿಮ ಕೀ ಉತ್ತರವನ್ನು ವೆಬ್‌ಸೈಟ್‌ನಲ್ಲಿಯೇ ಪ್ರಕಟಿಸಲಾಗುತ್ತದೆ ಎಂದು ಕೆ-ಸೆಟ್ ಸಂಯೋಜನಾಧಿಕಾರಿ ತಿಳಿಸಿದ್ದಾರೆ.
ಸಮೂಹ ಸಂವಹನ ಪತ್ರಿಕೆಯಲ್ಲಿ ಪತ್ರಿಕೆಗಳಲ್ಲಿ ಯಾವ ತಂತ್ರಾಂಶ ಬಳಕೆ ಮಾಡುತ್ತಾರೆ ಎಂದು ಪ್ರಶ್ನೆ ಕೇಳಿ, ನುಡಿ, ಬರಹ, ಯೂನಿಕೋಡ್, ಶ್ರೀಲಿಪಿ ಎಂದು ಕೇಳಲಾಗಿದೆ. ಒದೊಂದು ಪತ್ರಿಕೆ ಒದೊಂದು ತಂತ್ರಾಂಶವನ್ನು ಬಳಕೆ ಮಾಡುತ್ತದೆ. ಹೀಗಿರುವಾಗ ಅಭ್ಯರ್ಥಿಗಳು ಯಾವ ಉತ್ತರ ಹಾಕಿದರೂ ಸರಿಯಾಗುತ್ತದೆ. ಪ್ರಶ್ನೆ ತಪ್ಪಾಗಿರುವುದರಿಂದ ಇದಕ್ಕೆ ಕೃಂಪಾಂಕ ನೀಡಬೇಕೆಂದು ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದೆ. ಆದರೆ, ಇದಕ್ಕೆ ಒಂದು ಸಾವಿರ ರೂ.ಪಾವತಿಸಬೇಕು. ಹೋಗಲಿ ಪಾವತಿಸೋಣ ಎಂದರೆ ಈ ಪ್ರಶ್ನೆಗೆ ದಾಖಲೆಗಳನ್ನು ಒಗದಿಸಿ ಎಂದು ಹೇಳಿದೆ. ಅದನ್ನು ಎಲ್ಲಿಂದ ಹುಡುಕಲು ಸಾಧ್ಯ ಎಂದು ಅಭ್ಯರ್ಥಿಯೊಬ್ಬರು ಪ್ರಶ್ನಿಸಿದ್ದಾರೆ.
ಇದೇ ರೀತಿ ಹಲವು ವಿಷಯಗಳಲ್ಲೂ ಆಗಿದೆ. ಮೊದಲು ಆಕ್ಷೇಪಣೆಗೆ ವಿಧಿಸಿರುವ ಶುಲ್ಕವನ್ನು ರದ್ದು ಮಾಡಬೇಕೆಂದು ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.