ನ್ಯೂಸ್

ಕೆ.ಸಿ ವ್ಯಾಲಿ ಹರಿಯುವ ಪ್ರದೇಶದಲ್ಲಿ ಬೆಳೆ ಸಮೀಕ್ಷೆ ನಡೆಸಿದ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು

ವಿಜಯವಾಣಿ ಸುದ್ದಿಜಾಲ ಕೋಲಾರ

ಕೆ.ಸಿ.ವ್ಯಾಲಿ ನೀರು ಬೆಳೆಗಳಿಗೆ ಮಾರಕವಾಗಿದೆ. ಇದರಿಂದ ಬೆಳೆಗಳು ಹಾಳುಗುತ್ತಿವೆ. ಹಾಗೂ ವೈರಸ್ ಹೆಚ್ಚಾಗುತ್ತಿದೆ ಎಂದು ರೈತರು ಹಾಗೂ ಸಂಘ ಸಂಸ್ಥೆಯವರು ಇತ್ತೀಚೆಗೆ ಮಾಡುತ್ತಿದ್ದ ಆರೋಪಗಳ ಹಿನ್ನಲೆಯಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಗುರುವಾರ ಕೋಲಾರ ತಾಲ್ಲೂಕಿನ ಗ್ರಾಮಗಳಿಗೆ ಭೇಟಿ ನೀಡಿ, ಬೆಳೆಗಳನ್ನು ಪರಿಶೀಲಿಸಿ ಬೆಳೆಗಳ ಮಾದರಿಯನ್ನು ಸಂಗ್ರಹಿಸಿದರು.

ಜಿಲ್ಲೆಯಲ್ಲಿ ಕೆ.ಸಿ.ವ್ಯಾಲಿ ಹರಿಯುತ್ತಿರುವ ನೀರಿನ ಪ್ರದೇಶಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಕೋಲಾರ ತಾಲ್ಲೂಕಿನ ಸುಗಟೂರು ಹೋಬಳಿಯ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಟಿ.ಎನ್.ರವಿ ಅವರ ತೋಟಕ್ಕೆ ಭೇಟಿ ನೀಡಿ, ರೈತ ಬೆಳೆಯಲಾಗಿದ್ದ ಟೊಮೆಟೋ, ಬೀನ್ಸ್, ಕ್ಯಾಪ್ಸಿಕಂ, ಬದನೇಕಾಯಿ, ಕ್ಯಾರೆಟ್ ಬೆಳೆಗಳ ಮಾದರಿಯನ್ನು ಸಂಗ್ರಹಿಸಿದರು.

ಭೇಟಿ ನೀಡಿದ ಅಧಿಕಾರಿಗಳ ತಂಡದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿ ರಾಜು, ಜಿಕೆವಿಕೆ ಪ್ರಾಧ್ಯಾಪಕ ಡಾ.ಬಿ.ಜಿ.ವಾಸಂತಿ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಶಶಿಕುಮಾರ್ ಮುಂತಾದವರು ಇದ್ದರು.

ಅಧಿಕಾರಿಗಳು ಮಾಧ್ಯಮಗಳೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಮಾತನಾಡದೆ ಬೆಳೆಗಳ ಮಾದರಿಯನ್ನು ಪಡೆದಿದ್ದೇವೆ. ಇವುಗಳನ್ನು ಲ್ಯಾಬಿಗೆ ಕಳುಹಿಸಲಾಗುವುದು. ಲ್ಯಾಬ್ ವರದಿ ಬಂದ ನಂತರ ಕೆ.ಸಿ.ವ್ಯಾಲಿ ನೀರಿನಿಂದ ತೊಂದರೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಇಲ್ಲಿಯವರೆವಿಗೂ ಅನೇಕ ಬಾರಿ ಮಾದರಿಗಳನ್ನು ಪಡೆದು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆ.ಸಿ.ವ್ಯಾಲಿ ನೀರಿನಿಂದ ಯಾವುದೇ ರೀತಿಯ ತೊಂದರೆ ಇಲ್ಲ ಎಂಬ ವರದಿ ಬಂದಿದೆ. ಮತ್ತೆ ಮತ್ತೊಂದು ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಗಳಿಯ ಪ್ರಾದೇಶಿಕ ನಿರ್ದೇಶಕ ಜೆ.ಚಂದ್ರಬಾಬು ತಿಳಿಸಿದ್ದಾರೆ.

ಅಧಿಕಾರಿಗಳೊಂದಿಗೆ ಸುಗಟೂರು ಗ್ರಾಪಂ ಅಧ್ಯಕ್ಷ ಭೂಪತಿಗೌಡ, ಪ್ರಗತಿಪರ ರೈತ ರವಿ ಹಾಗೂ ಸ್ಥಳೀಯ ರೈತರು ಇದ್ದರು.

ಚಿತ್ರ ೦೬ ಕೆ.ಎಲ್.ಆರ್. ೦೨ : ಕೆ.ಸಿ.ವ್ಯಾಲಿ ನೀರು ಹರಿಯುವ ಅಚ್ಚಕಟ್ಟು ಪ್ರದೇಶ ತುರಾಂಡಹಳ್ಳಿ ಗ್ರಾಮದ ಪ್ರಗತಿಪರ ರೈತ ಕೆ.ಎಂ.ರವಿ ತೋಟದಲ್ಲಿ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಾಗೂ ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.