ನ್ಯೂಸ್

ಕೆ.ಜಿ.ಎಫ್ ನಗರದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ತಯಾರಿಸಲು ಸಚಿವ ಬೈರತಿ ಸುರೇಶ್ ಸೂಚನೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಫ್ ಯೋಜನೆ ನಿರ್ಮಾಣಕ್ಕೆ ಸಂಬAಧಿಸಿದAತೆ ವಿಸ್ತೃತ ಯೋಜನೆ ವರದಿಯನ್ನು ತಯಾರಿಸುವಂತೆ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಬುಧವಾರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಅಧಿಕಾರಿಗಳು, ಕೆ.ಜಿ.ಎಫ್ ಮತ್ತು ಬಂಗಾರಪೇಟೆ ತಹಶೀಲ್ದಾರ್ ಮತ್ತು ಕೆ.ಜಿ.ಎಫ್ ನಗರಾಭಿವೃದ್ಧಿ ಆಯುಕ್ತರು ಹಾಗೂ ಕೆ.ಜಿ.ಎಫ್ ನಗರ ಯೋಜನಾ ಆಯುಕ್ತರ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ೨೦೨೪-೨೫ನೇ ಸಾಲಿನ ಆಯ-ವ್ಯಯ ಮಂಡನೆ ವೇಳೆ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ, ಕೋಲಾರ ಚಿನ್ನದ ಗಣಿ ಪ್ರದೇಶ (ಕೆ.ಜಿ.ಎಫ್), ಬಳ್ಳಾರಿ ಮತ್ತು ತುಮಕೂರಿನ ವಸಂತ ನರಸಾಪುರದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣದ ಬಗ್ಗೆ ಘೋಷಿಸಿದ್ದಾರೆ. ಕೋಲಾರ ಜಿಲ್ಲೆಯ ಕೆ.ಜಿ.ಎಫ್ ನಗರದಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣ ಮಾಡಲು ನಗರಾಭಿವೃದ್ಧಿ ಇಲಾಖೆ ಪ್ರಸ್ತಾವನೆ ಮುಂದಿಟ್ಟು, ಇದನ್ನು ಮತ್ತಷ್ಟು ಚುರುಕುಗೊಳಿಸಿ, ಇದಕ್ಕೆ ಸಂಭAದಿಸಿದ ಕಾರ್ಯಸಾಧ್ಯತೆಯ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸುವಂತೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳಿಗೆ ಸಚಿವರು ಸೂಚಿಸಿದರು.

ಕೆ.ಜಿ.ಎಫ್ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣಕ್ಕಾಗಿ ಬಿ.ಜಿ.ಎಂ.ಎಲ್ ಸುಪರ್ಧಿಯಲ್ಲಿರುವ ರಾಜ್ಯ ಸರ್ಕಾರದ ಸುಮಾರು ೯೬೦ ಎಕರೆ ಜಮೀನು ಇದ್ದು, ಇದರಲ್ಲಿ ಕೆ.ಜಿ.ಎಫ್ ತಾಲ್ಲೂಕಿನಲ್ಲಿ ಬಂಗಾರದ ಗಣಿ ಗ್ರಾಮದ ಸರ್ವೆ ನಂ. ೩ ರಲ್ಲಿ ೨೯೪ ಎಕರೆ ಜಾಗವನ್ನು ಗುರುತಿಸಲಾಗಿದೆ.

ಬಿ.ಇ.ಎಂ.ಎಲ್ ಸುಪರ್ಧಿಯಲ್ಲಿದ್ದ ಕೆಲವು ಎಕರೆ ಜಾಗವನ್ನು ನಗರಾಭಿವೃದ್ಧಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಉಳಿದ ಜಮೀನನ್ನು ಪಡೆಯಲು ಕ್ರಮ ವಹಿಸುವಂತೆ ನಗರಾಭಿವೃದ್ಧಿ ಸಚಿವರು ಸೂಚಿಸಿದರು.

ಚೆನೈ-ಬೆಂಗಳೂರು ಎಕ್ಸ್ಪ್ರೇಸ್ ಹೆದ್ದಾರಿ ಕೆ.ಜಿ.ಎಫ್ ಮೂಲಕ ಹಾದು ಹೋಗಿದ್ದು, ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಜಾಗದಿಂದ ೨.೫ ಕಿ.ಮೀ ಅಂತರದಲ್ಲಿದೆ. ಎಕ್ಸ್ಪ್ರೇಸ್ ಹೆದ್ದಾರಿಯಿಂದ ಟೌನ್‌ಶಿಫ್‌ಗೆ ನೇರ ಸಂಪರ್ಕ ಕಲ್ಪಿಸಲು ಸಾಧ್ಯವೇ ಎಂಬುವುದನ್ನು ಪರಿಶೀಲಿಸಲು ಸಂಬAಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಎಕ್ಸ್ಪ್ರೇಸ್ ಹೆದ್ದಾರಿಯ ಮೂಲಕ ಇಂಟಿಗ್ರೇಟೆಡ್ ಟೌನ್‌ಶಿಫ್ ಗೆ ನೇರ ರಸ್ತೆ ಕಲ್ಪಿಸಲು ಸಾಧ್ಯವಾಗದಿದ್ದಲ್ಲಿ, ಸರ್ವಿಸ್ ರಸ್ತೆ, ಎತ್ತರಿಸಿದ ರಸ್ತೆ ಅಥವಾ ಮ್ಯಾಜಿಕ್ ಬಾಕ್ಸ್ ಮೂಲಕ ರಸ್ತೆ ನಿರ್ಮಾಣ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ಸಮೀಕ್ಷೆ ಮಾಡಿ ಅದಷ್ಟು ಬೇಗ ವರದಿ ನೀಡುವಂತೆ ಕೆ.ಜಿ.ಎಫ್ ನಗರ ಯೋಜನಾ ಪ್ರಾಧಿಕಾರದ ಆಯುಕ್ತರಿಗೆ ಸೂಚಿಸಿದರು.

ಕೆ.ಜಿ.ಎಫ್ ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣ ಮಾಡಲು ತಗಲುವ ವೆಚ್ಚ ಎಷ್ಟಾಗುತ್ತದೆ ಎನ್ನುವುದರ ಬಗ್ಗೆ ವಿಸ್ತೃತ ವರದಿಯನ್ನು ನೀಡಲು ಮತ್ತು ಇಂಟಿಗ್ರೇಟೆಡ್ ಟೌನ್‌ಶಿಫ್ ನಿರ್ಮಾಣದ ಬಗ್ಗೆ ವಿಸ್ತೃತ ವರದಿಯನ್ನು ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಮೂಲಕ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರಿಗೆ ಸೂಚಿಸಿ, ಇದಕ್ಕಾಗಿ ಖಾಸಗಿ ಕಂಪನಿಗಳನ್ನು ಆಹ್ವಾನಿಸಲು ಟೆಂಡರ್ ಕರೆಯಲು ಸಹ ಸಚಿವರು ಸೂಚಿಸಿದರು.

ವಸತಿ ಯೋಜನೆ, ಕೈಗಾರಿಕೆಗಳು, ಆರೋಗ್ಯ ಘಟಕಗಳು, ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮುಂಗಟ್ಟುಗಳು, ಬ್ಯಾಂಕ್‌ಗಳು, ಉದ್ಯಾನವನ, ಮನೋರಂಜನ ತಾಣಗಳು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒಳಗೊಂಡAತೆ, ಸದರಿ ಯೋಜನೆಯಿಂದಾಗಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಮತ್ತು ಉತ್ತಮ ವಸತಿ ಯೋಜನೆಯ ವಿಭಿನ್ನ ಹಾಗೂ ವಿಶಿಷ್ಟವಾದ ಇಂಟಿಗ್ರೇಟೆಡ್ ಟೌನ್‌ಶಿಫ್ ಅನ್ನು ಕೆ.ಜಿ.ಎಫ್ ನಲ್ಲಿ ನಿರ್ಮಾಣ ಮಾಡಲು ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಮುಂದಾಗಿರುವುದಾಗಿ ತಿಳಿಸಿದರು.

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧ ಹಾಗೂ ಹಣಕಾಸು ನಿಗಮದ ಅಧ್ಯಕ್ಷರು ಹಾಗೂ ಬಂಗಾರಪೇಟೆ ಶಾಸಕರಾದ ಎಸ್. ಎನ್. ನಾರಾಯಣಸ್ವಾಮಿ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಎಂ. ದೀಪ, ಕೆ.ಯು.ಐ.ಡಿ.ಎಫ್.ಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶರತ್, ಮುಖ್ಯ ಅಭಿಯಂತರ ನಂದೀಶ್ ಕುಮಾರ್, ಬಂಗಾರಪೇಟೆ ಮತ್ತು ಕೆ.ಜಿ.ಎಫ್ ತಹಶೀಲ್ದಾರ್, ಕೆ.ಜಿ.ಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಸೇರಿದಂತೆ ಕೆಲ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೨ : ಸಚಿವ ಬೈರತಿ ಸುರೇಶ್ ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ವಿಧಾನಸೌಧದ ಕಛೇರಿಯಲ್ಲಿ ಕೆ.ಜಿ.ಎಫ್. ಟೌನ್‌ಶಿಫ್ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದರು. ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ನಗರಾಭಿವೃದ್ಧಿ ಕಾರ್ಯದರ್ಶಿ ಎಂ.ದೀಪ ಮುಂತಾದವರು ಉಪಸ್ಥಿತರಿದ್ದರು.