ಕೆ.ಆರ್.ನಗರದ ಬಸವೇಶ್ವರ ಬಡಾವಣೆಯಲ್ಲಿ ಅಭಿವೃದ್ಧಿ ಮಾಡಲೆಂದು ಜೆಸಿಬಿಯಲ್ಲಿ ರಸ್ತೆ ಅಗೆದು ಬಿಟ್ಟಿರುವುದು.  
ನ್ಯೂಸ್

ಕೆ.ಆರ್.ನಗರದ ರಸ್ತೆಗಳಲ್ಲಿ ಸಂಚಾರ ಅಸಾಧ್ಯ!

ಕೆ.ಆರ್.ನಗರ: ಅಭಿವೃದ್ಧಿ ಮಾಡಲೆಂದು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ರಸ್ತೆಗಳನ್ನು ಅಗೆದು ನಾಲ್ಕೈದು ತಿಂಗಳು ಕಳೆದಿದ್ದು, ಕಾಮಗಾರಿ ಆರಂಭವಾಗದ ಹಿನ್ನೆಲೆಯಲ್ಲಿ ವಾಹನ ಸವಾರು ಹಾಗೂ ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಲ್ಲಿನ ಪುರಸಭೆಗೆ ಕಳೆದ ಬಾರಿ ಸರ್ಕಾರದಿಂದ ವಿಶೇಷ ಅನುದಾನ ಮತ್ತು ನಗರೋತ್ಥಾನ ಯೋಜನೆಯಡಿ 18 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಟೆಂಡರ್ ಆದ ಬಳಿಕ ಪಟ್ಟಣದ 23 ವಾರ್ಡ್‌ಗಳಿಗೆ ಅನುದಾನ ಹಂಚಿಕೆಯಾಗಿ ಹಲವು ವರ್ಷಗಳಿಂದ ಅಭಿವೃದ್ಧಿಯನ್ನೇ ಕಾಣದೆ ನನೆಗುದಿಗೆ ಬಿದ್ದಿದ್ದ ರಸ್ತೆಗಳಿಗೆ ಕಾಯಕಲ್ಪ ದೊರೆಯಲಿದೆ ಎಮದು ಸ್ಥಳೀಯ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದರು.

ಪಟ್ಟಣದ ಬಸವೇಶ್ವರ ಬಡಾವಣೆಯ 7ನೇ ರಸ್ತೆಯ 2ನೇ ಕ್ರಾಸ್ ರಸ್ತೆ ಸೇರಿದಂತೆ ಇನ್ನೂ ಹಲವೆಡೆ ರಸ್ತೆಗಳನ್ನು ಜೆಸಿಬಿ ಮೂಲಕ ಅಗೆದು ಸಮತಟ್ಟು ಮಾಡದೆ ಬಿಡಲಾಗಿದೆ. ಇದರಿಂದ ಕಲ್ಲುಗಳು ಮೇಲ್ಮುಖವಾಗಿದ್ದು ಸೈಕಲ್‌ಗಳು ಮತ್ತು ದ್ವಿಚಕ್ರ ವಾಹನಗಳ ಸಂಚಾರ ಕಷ್ಟಕರವಾಗಿದೆ. ಹಲವು ವಿದ್ಯಾರ್ಥಿಗಳು ಸೈಕಲ್‌ನಲ್ಲಿ ಬಿದ್ದು ಎದ್ದು ಗಾಯಗೊಂಡಿರುವ ಘಟನೆಗಳೂ ನಡೆದಿವೆ. ರಸ್ತೆಯಲ್ಲಿರುವ ಜೆಲ್ಲಿಕಲ್ಲುಗಳ ಮೇಲೆ ವಾಹನಗಳು ಸಂಚರಿಸುವಾಗ ಟೈರ್ ಸ್ಕಿಡ್ ಆಗಿ ಬೀಳುವುದಲ್ಲದೆ ವಾಹನಗಳ ಚಕ್ರಗಳ ಅಂಚಿಗೆ ಸಿಗುವ ಕಲ್ಲು ಸಿಡಿದು ಅಕ್ಕಪಕ್ಕದಲ್ಲಿ ತೆರಳುವ ಪಾದಚಾರಿಗಳು ಮತ್ತು ವಾಹನ ಸವಾರರಿಗೆ ತಗುಲಿ ಗಾಯಗೊಂಡಿದ್ದಾರೆ.

ಕಳಪೆ ಕಾಮಗಾರಿ: ರಸ್ತೆ ಮಾಡಬೇಕಾದರೆ ಮೊದಲು ಅಗೆದು ಮೆಟ್ಲಿಂಗ್ ಮಾಡಿ ಹದಗೊಳಿಸಿದ ನಂತರ ಡಾಂಬರೀಕರಣ ಮಾಡಬೇಕು. ಆದರೆ ಕೆಲವು ಬಡಾವಣೆಗಳಲ್ಲಿ ಎಸ್ಟೀಮೆಟ್‌ನಂತೆ ಮೆಟ್ಲಿಂಗ್ ಮಾಡದೆ ಡಾಂಬರ್ ಹಾಕಲಾಗಿದೆ. ಆ ಬಳಿಕ ಎರಡು ದಿನಕ್ಕೆ ರಸ್ತೆ ಡಾಂಬರ್ ಕಿತ್ತು ಬಂದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಸ್ಥಳೀಯರು ಪುರಸಭಾ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅಲ್ಲದೆ ಕಳಪೆ ಕಾಮಗಾರಿಗೆ ಬಿಲ್ ಮಾಡುವ ಮೂಲಕ ಗುತ್ತಿಗೆದಾರರ ಜೇಬು ಭರ್ತಿಯಾಗಲು ಅಧಿಕಾರಿಗಳೇ ಸಹಕಾರ ನೀಡುತ್ತಿದ್ದಾರೆಯೇ ಎಂಬ ಅನುಮಾನ ಈಗ ಮನೆ ಮಾಡಿದೆ.

ಸಾರ್ವಜನಿಕರಿಗೆ ಅನುಕೂಲ ಮಾಡಿಕೊಬೇಕಾದವರೇ ಕೈಕಟ್ಟಿ ಕುಳಿತರೆ ಸಾಮಾನ್ಯ ಜನರು ಏನು ಮಾಡಲು ತಾನೇ ಸಾಧ್ಯ. ಜನರಿಂದ ಸಂಗ್ರಹವಾಗುವ ತೆರಿಗೆಯನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆಯಾದರೂ ಅದು ಸರಿಯಾದ ರೀತಿ ಆಗುತ್ತಿಲ್ಲ. ವಿನಾಕಾರಣ ಹಣವನ್ನು ಹಾಳು ಮಾಡುವ ಬದಲು ಸರಿಯಾಗಿ ನಿರ್ವಹಣೆ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹ.

ಅಂದ ಕಳೆದುಕೊಂಡ ಸುಸಜ್ಜಿತ ಪಟ್ಟಣ: ಮೈಸೂರು ಅರಸರ ಕನಸಿನ ಕೂಸಾದ ಕೃಷ್ಣರಾಜನಗರ ಈಗ ಗುಂಡಿ ಬಿದ್ದಿರುವ ರಸ್ತೆಗಳು, ಒತ್ತುವರಿಯಾಗಿ ಕಿರಿದಾದ ರಸ್ತೆಗಳಿಂದ ತನ್ನ ಅಂದವನ್ನು ಕಳೆದುಕೊಂಡಿದೆ. ಅಲ್ಲದೆ ಪಟ್ಟಣದ ಹೃದಯಭಾಗದಲ್ಲಿ ರಸ್ತೆಗಳು ಡಾಂಬರ್ ಕಿತ್ತು ಹೋಗಿದ್ದು ವಾಹನಗಳು ದುಸ್ತಿಯಲ್ಲಿರುವ ರಸ್ತೆಗಳಲ್ಲೇ ಸಂಚರಿಸುವ ಪರಿಸ್ಥಿತಿ ಇದೆ. ನಗರದ ಹಲವು ಹೊಸ ಬಡಾವಣೆಗಳಲ್ಲಿ ಇನ್ನು ಮಣ್ಣಿನ ರಸ್ತೆಗಳೇ ಇದ್ದು, ಆ ರಸ್ತೆಗಳಲ್ಲೇ ಸ್ಥಳೀಯರು, ವಾಹನಗಳು ಸಂಚರಿಸಬೇಕು. ಬೇಸಿಗೆ ಕಾಲದಲ್ಲಿ ಹೇಗೋ ಸಂಚರಿಸಬಹುದು. ಮಳೆಗಾಲದಂತಲ್ಲೂ ಗುಂಡಿ ಬಿದ್ದು ನೀರು ನಿಂತು ಕೆಸರು ಮಯವಾಗಿರುತ್ತದೆ. ಸ್ವಲ್ಪ ಎಚ್ಚರಿಕೆ ತಪ್ಪಿದರು ಅನಾಹುತ ಸಂಭವಿಸುವುದು ಗ್ಯಾರಂಟಿ.

ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಇಂಜಿನಿಯರ್‌ಗಳ ನಿರ್ಲಕ್ಷೃದಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ. ಕೆಲವೆಡೆ ಎರಡೇ ದಿನಕ್ಕೆ ಡಾಂಬರ್ ಕಿತ್ತು ಬಂದಿದೆ. ಅಲ್ಲದೆ ನಮ್ಮ ಮನೆಯ ಸಮೀಪದ ಮುಖ್ಯ ರಸ್ತೆಯನ್ನು ಜೆಸಿಬಿಯಲ್ಲಿ ಅಗೆದು ಹಾಗೇ ಬಿಟ್ಟಿರುವುದರಿಂದ ಇದರಿಂದ ಸಂಚರಿಸಲು ಕಷ್ಟವಾಗುತ್ತಿದೆ.
ಕೆ.ಎಸ್.ಗುಣಶೇಖರ್ ಸ್ಥಳೀಯ ನಿವಾಸಿ

ಅರ್ಧಕ್ಕೆ ಕಾಮಗಾರಿ ನಿಂತಿರುವ ರಸ್ತೆಗಳಲ್ಲಿ ವಾಹನಗಳನ್ನು ಓಡಿಸಲು ಬಹಳ ಸಮಸ್ಯೆಯಾಗುತ್ತಿದೆ. ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಶಾಸಕ ಡಿ.ರವಿಶಂಕರ್ ಹಾಗೂ ಪುರಸಭಾ ಅಧಿಕಾರಿಗಳು ಗಮನಹರಿಸಬೇಕು. ಪಟ್ಟಣದ ಅನೇಕ ಬಡಾವಣೆಗಳಲ್ಲಿ ಇನ್ನೂ ಸಾಕಷ್ಟು ರಸ್ತೆಗಳು ಅಭಿವೃದ್ಧಿಯಾಗಬೇಕಿದ್ದು, ಕಾಂಗ್ರೆಸ್ ಸರ್ಕಾರ ಅಧಿಕಾರರದಲ್ಲಿರುವುದರಿಂದ ಶಾಸಕರು ಹೆಚ್ಚು ಅನುಧಾನ ತಂದು ಅಭಿವೃದ್ಧಿ ಮಾಡಲಿ.
ಬಂಕ್ ಚಂದ್ರು ಮಾಲೀಕ, ಗೌರಿಶಂಕರ್ ಪೆಟ್ರೋಲ್ ಬಂಕ್

ಈಗಾಗಲೇ ಪೂರ್ಣಗೊಂಡಿರುವ ಕೆಲವು ರಸ್ತೆ ಅಭಿವೃದ್ಧಿ ಕಾಮಗರಿಗಳ ಬಿಲ್ ಗುತ್ತಿಗೆದಾರರಿಗೆ ಪಾವತಿಯಾಗದೆ ಬಾಕಿ ಉಳಿದಿದೆ. ಹೀಗಾಗಿ ಅಭಿವೃದ್ಧಿ ಕಾಮಗಾರಿ ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಶಾಸಕರ ಗಮನ ಸೆಳೆಯಲಾಗಿದ್ದು, ಬಿಲ್ ಆದ ತಕ್ಷಣ ಕೆಲಸ ಪ್ರಾರಂಭಿಸಲಿದ್ದೇವೆ ಎಂದು ಗುತ್ತಿಗೆದಾರರು ತಿಳಿಸಿದ್ದಾರೆ. ಶೀಘ್ರ ಸಮಸ್ಯೆ ಬಗೆಹರಿಸಿ ಸಾರ್ವಜನಿಕ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು.
ಚಂದ್ರಶೇಖರ್, ಜೆಇ, ಪುರಸಭೆ, ಕೆ.ಆರ್.ನಗರ.

ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ15 ಮತ್ತು 16ನೇ ವಾರ್ಡ್‌ಗೆ ಸೇರಿವ 250 ಮೀ.ನಷ್ಟು ರಸ್ತೆ ಅಭಿವೃದ್ಧಿ ಮಾಡಲೆಂದು ವಿಧಾನಸಭೆ ಚುನಾವಣೆಗೂ ಮುನ್ನವೇ ಕಿತ್ತು ಹಾಕಲಾಗಿತ್ತು. ಆದರೆ ಇನ್ನು ಸರಿಪಡಿಸಿಲ್ಲ. ನಾವು ಹಲವು ಬಾರಿ ಗುತ್ತಿಗೆದಾರರು, ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆ ವೇಳೆ ಪರಿಶೀಲನೆ ನಡೆಸಿ, ಹೋದವರು ಮತ್ತೆ ಬಂದಿಲ್ಲ. ಪುರಸಭೆಯ ಮುಂದಿನ ಸಭೆಯಲ್ಲಿ ವಿಷಯ ಪ್ರಸ್ತಾಪಿಸುತ್ತೇನೆ.
ಕೆ.ಬಿ.ವೀಣಾ ವೃಷಬೇಂದ್ರ
ಪುರಸಭಾ ಸದಸ್ಯೆ