ಕೆ.ಆರ್.ನಗರ: ಕೆ.ಆರ್.ನಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ಮುಖಂಡರ ಪಾತ್ರ ಹೆಚ್ಚಾಗಿದ್ದು, ಅದರ ಆಧಾರದ ಮೇಲೆ ನಾವು ವಿಧಾನಸಭಾ ಚುನಾವಣೆಯಲ್ಲಿ ಗೆಲವು ಪಡೆಯುತ್ತೇವೆ ಎಂದು ರಾಜ್ಯ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀ ನಿವಾಸಗೌಡ ಹೇಳಿದರು.
ಪಟ್ಟಣದ ಈಶ್ವರನಗರದಲ್ಲಿ ಮಂಗಳವಾರ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಿದ್ದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಹಿತ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ನಾವು ಎಲ್ಲ ರೀತಿಯ ಸಹಕಾರ ನೀಡುತ್ತಿದ್ದೇವೆ. ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಒಂದು ಸಾವಿರ ಕೋಟಿ ರೂ. ಅನುದಾನ ನೀಡಿರುವ ಜತೆಗೆ ವಸತಿ ಸಚಿವರು ವಸತಿ ಯೋಜನೆಯಡಿ 2,500 ಮನೆಗಳನ್ನು ಹೆಚ್ಚುವರಿಯಾಗಿ ಮಂಜೂರು ಮಾಡಿದ್ದಾರೆ. ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭ ಸೇರಿದಂತೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಬಗ್ಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಪಕ್ಷವನ್ನು ಸದೃಢವಾಗಿ ಸಂಘಟಿಸಿ ಚುನಾವಣೆ ವೇಳೆ ವರಿಷ್ಠರು ಆಯ್ಕೆ ಮಾಡಿದ ಅಭ್ಯರ್ಥಿ ಪರ ಪ್ರಾಮಾಣಿಕವಾಗಿ ದುಡಿಯಬೇಕು ಎಂದು ಕರೆ ನೀಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ನಮ್ಮಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದು, ಅಪಪ್ರಚಾರಗಳಿಗೆ ಯಾರು ಕಿವಿಗೊಡಬಾರದು ಎಂದು ಕಾರ್ಯಕರ್ತರಿಗೆ ಇದೇ ವೇಳೆ ಸಲಹೆ ನೀಡಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಲ್ಲಿಯೇ ಬಿಜೆಪಿ ಗೆಲುವಿನ ದಾಖಲೆ ಬರೆದಿರುವಾಗ ಅದು ನಮ್ಮಲ್ಲಿ ಯಾಕೆ ಸಾಧ್ಯವಾಗುವುದಿಲ್ಲ ಎಂಬುದನ್ನು ಪ್ರಶ್ನಿಸಿಕೊಂಡು ಪರಸ್ಪರ ಕೈಜೋಡಿಸಿ ಕೆಲಸ ಮಾಡಿದರೆ ಆ ವಿಜಯದ ಪತಾಕೆಯನ್ನು ಇಲ್ಲಿಯೂ ಹಾರಿಸಬಹುದು. ಆದ್ದರಿಂದ ವಿಧಾನಸಭಾ ಕ್ಷೇತ್ರದ 252 ಬೂತ್‌ಗಳಲ್ಲಿ ನಿರಂತರವಾಗಿ 10 ದಿನಗಳ ಕಾಲ ಬೂತ್ ವಿಜಯ ಅಭಿಯಾನ ನಡೆಯಲಿದ್ದು, ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವೈ.ಮಂಜು, ಪ್ರಧಾನ ಕಾರ್ಯದರ್ಶಿ ಮಾಕರ್ಂಡೇಯಸ್ವಾಮಿ, ಪುರಸಭೆ ಸದಸ್ಯರಾದ ಉಮಾಶಂಕರ, ಜಿ.ಪಿ.ಮಂಜು, ಆಶ್ರಯ ಕಮಿಟಿ ಸದಸ್ಯ ಕೆ.ಆರ್.ಮಂಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಪ್ರಭಾಕರ್ ಜೈನ್, ಭೂನ್ಯಾಯ ಮಂಡಳಿ ಸಮಿತಿ ಸದಸ್ಯ ಸಂತೋಷ್, ಬಿಜೆಪಿ ಮುಖಂಡರಾದ ಬಸವರಾಜು, ಚಿರಾಗ್‌ಪಟೇಲ್, ನಟರಾಜ್, ಮಂಜ ಇತರರು ಇದ್ದರು.