ನ್ಯೂಸ್

ಕೃಷ್ಣ-ರಾಧೆ ವೇಷದಲ್ಲಿ ಕಂಗೊಳಿಸಿದ ಮಕ್ಕಳು

ಕೆ.ಆರ್.ನಗರ: ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪಟ್ಟಣದ ಶ್ರೀ ಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಬಾಲಗೋಕುಲ ಶ್ರೀ ಕೃಷ್ಣ ವೇಷ ಸ್ಪರ್ಧೆ ಮತ್ತು ಮೆರವಣಿಗೆ ಭಾನುವಾರ ಸಂಭ್ರಮದಿಂದ ನೆರವೇರಿತು.

ರಾಧಾ ಮತ್ತು ಶ್ರೀ ಕೃಷ್ಣ ವೇಷ ಧರಿಸಿದ್ದ ಪಟ್ಟಣದ ಸುಮಾರು 200 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪಾಲಕರು ತಮ್ಮ ಮಕ್ಕಳಲ್ಲಿ ಮುದ್ದು ಕೃಷ್ಣ ಮತ್ತು ರಾಧೆಯರ ಪ್ರತಿರೂಪವನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು. ಸ್ಪರ್ಧೆ ನಂತರ ರಾಧಾಕೃಷ್ಣ ವೇಷಧಾರಿ ಮಕ್ಕಳನ್ನು ಟ್ರ್ಯಾಕ್ಟರ್ ಮತ್ತು ಆಟೋದಲ್ಲಿ ಕುಳ್ಳಿರಿಸಿ ಊರಿನ ರಾಜಬೀದಿಗಳಲ್ಲಿ ಚಂಡೆ, ಜಾಗಟೆ, ತಾಳ ಮತ್ತು ಭಗವಂತನ ನಾಮಸ್ಮರಣೆಯ ನಾದದೊಂದಿಗೆ ಮೆರವಣಿಗೆ ಮಾಡಲಾಯಿತು.

ಮಹಿಳಾ ಸದಸ್ಯರು ನಡೆಸಿಕೊಟ್ಟ ಶ್ರೀ ಕೃಷ್ಣನ ನಾಮಸ್ಮರಣೆ ಭಜನೆ ಹಾಗೂ ಸದಸ್ಯರ ಕುಣಿತ ಮೆರವಣಿಗೆಗೆ ಮೆರುಗು ನೀಡಿತು. ಮೆರವಣಿಗೆ ನಂತರ ನಡೆದ ಮೊಸರು ಕುಡಿಕೆ ಒಡೆಯುವ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಟಿಫಿನ್ ಬಾಕ್ಸ್ ಮತ್ತು ಸಿಹಿ ತಿಂಡಿ ವಿತರಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ.ಪಿ.ಮೋಹನ್ ದಾಸ್ ಭಟ್ ಶ್ರೀ ಕೃಷ್ಣನ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣ ಚೆಲ್ಲ ಅಧ್ಯಕ್ಷತೆ ವಹಿಸಿದ್ದರು. ಬಹುಮಾನದ ಪ್ರಾಯೋಜಕತ್ವವನ್ನು ಹಿರಿಯ ಸದಸ್ಯ ಡಾ.ಜನಾರ್ಧನ ಭಟ್ ವಹಿಸಿದ್ದರು. ಪ್ರತಿಷ್ಠಾನದ ಖಜಾಂಚಿ ಕೃಷ್ಣಮೂರ್ತಿ, ಕಾರ್ಯದರ್ಶಿ ಎ.ಚೈತನ್ಯ, ಸಹ ಕಾರ್ಯದರ್ಶಿ ಡಾ.ಗೋವರ್ಧನಾಚಾರ್ಯ, ಎ.ನಾಗರಾಜ್, ಕೆ.ಎನ್.ಸೋಮಯಾಜಿ, ರಿಷಿಕೇಶ್, ಶಂಕರ್ ನಾರಾಯಣ್, ನಾಗರಾಜ ಪುರಾಣಿಕ್, ಮೋಹನ್‌ರಾವ್, ಸದಾನಂದ, ಅಶೋಕ್, ಕೃಷ್ಣಮೂರ್ತಿ, ರಾಮು, ರಘು, ಕೃಷ್ಣ ಭಟ್, ರಮಾನಂದ, ಕೇಶವ ಹಾಗೂ ಪ್ರತಿಷ್ಠಾನದ ಎಲ್ಲ ಸದಸ್ಯರು ಪಾಲ್ಗೊಂಡಿದ್ದರು.