ಚಕ್ಕೋಡನಹಳ್ಳಿಯಲ್ಲಿರುವ ಜಮೀನಿನಲ್ಲಿ ಸುರೇಶ್ ಮೇವು ಜೋಳ ಬೆಳೆದಿರುವುದು. 
ನ್ಯೂಸ್

ಕೃಷಿಯಲ್ಲಿ ಲಾಭ ಕಂಡುಕೊಂಡ ಪೊಲೀಸ್

ಎಚ್.ಡಿ.ಕೋಟೆ: ಪೊಲೀಸ್ ಕೆಲಸದ ಜತೆಗೆ ಬಿಡುವಿನ ವೇಳೆ ಹೆಡ್‌ಕಾನ್‌ಸ್ಟೇಬಲ್ ಟಿ.ಸುರೇಶ್ ತಮ್ಮ 5 ಎಕರೆ ಜಮೀನಿನಲ್ಲಿ ಸಮಗ್ರ ಬೆಳೆ ಬೆಳೆದಿದ್ದಾರಲ್ಲದೇ, ಹೈನುಗಾರಿಕೆಯಲ್ಲೂ ಸೈ ಎನಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ.

ಪಟ್ಟಣದಿಂದ 5 ಕಿ.ಮೀ. ಸಮೀಪದಲ್ಲಿ ಇರುವ ಚಕ್ಕೋಡನಹಳ್ಳಿ ಗ್ರಾಮದ ಜಮೀನ್ದಾರ್ ಲೇ. ತಮ್ಮಣ್ಣೇಗೌಡ ಅವರ ಮಗನಾದ ಟಿ. ಸುರೇಶ್ ವೃತ್ತಿಯಲ್ಲಿ ಪೊಲೀಸ್ ಆದರೂ ತಮ್ಮ ಮೂಲ ಕಸಬು ವ್ಯವಸಾಯವನ್ನು ಮಾತ್ರ ಬಿಟ್ಟಿಲ್ಲ. ತಾಲೂಕಿನ ಅಂತರಸಂತೆ ಠಾಣೆಯಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಸುರೇಶ್ ತಮ್ಮ ಬಿಡುವಿನ ವೇಳೆಯಲ್ಲಿ ಕುಟುಂಬದವರ ಜತೆಗೂಡಿ ಕೃಷಿ ಮಾಡಿ ಲಾಭ ಕಂಡುಕೊಂಡಿದ್ದಾರೆ.

ಪೊಲೀಸ್ ಎಂದರೆ ಲಾಠಿ ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವುದು ಒಂದೇ ಅಲ್ಲ. ನೇಗಿಲು ಹಿಡಿದು ಬೆಳೆ ಬೆಳೆದು ದೇಶಕ್ಕೆ ಅನ್ನ ಹಾಕುವುದಕ್ಕೂ ಸೈ ಎನ್ನುವುದನ್ನು ಸುರೇಶ್ ತೋರಿಸಿಕೊಟ್ಟಿದ್ದಾರೆ. ವ್ಯವಸಾಯ ಎಂದರೆ ಮೂಗು ಮುರಿಯುವ ಜನರ ನಡುವೆ ತಮ್ಮ 5 ಎಕರೆ ಜಮೀನಿನಲ್ಲಿ ಸಮಗ್ರ ಬೇಸಾಯ ಮಾಡಿದ್ದಾರೆ. ಹೈನುಗಾರಿಕೆಯಿಂದಲೂ ಲಾಭ ಕಾಣುತ್ತಿದ್ದಾರೆ.

5 ಎಕರೆ ಜಮೀನಿನಲ್ಲಿ 3 ಎಕರೆ ಮೆಕ್ಕೆಜೋಳ, 1 ಎಕರೆ ಮೇವು ಜೋಳ, 1 ಎಕರೆ ಶುಂಠಿ ಬೆಳೆದಿದ್ದಾರೆ. ಒಂದು ವರ್ಷದ ಹಿಂದೆ ಶುಂಠಿ ಹಾಗೂ ಮೇವು ಜೋಳದ ಮಧ್ಯೆ 150 ತೆಂಗಿನ ಗಿಡಗಳನ್ನು ಬೆಳೆಸಿದ್ದಾರೆ. 5 ಎಕರೆ ಜಮೀನಿನ ಸುತ್ತ 150 ಮಹಾಗನಿ, 100 ಬೇವು, 50 ಕಹಿ ಬೇವು ಮರಗಳನ್ನು ಬೆಳೆಸಿದ್ದಾರೆ. ಜತೆಗೆ 7 ಇಲಾಯಿತಿ ಹಸುಗಳನ್ನು ಸಾಕಿದ್ದಾರೆ. ಪ್ರತಿ ದಿನ 15 ರಿಂದ 20 ಲೀಟರ್ ಹಾಲನ್ನು ಕರೆದು ಡೇರಿಗೆ ಹಾಕುತ್ತಾರೆ. ಇದರಿಂದ 1.5 ಲಕ್ಷ ರೂ.ನಿಂದ 2 ಲಕ್ಷ ರೂ.ವರೆಗೆ ಆದಾಯ ಬರುತ್ತದೆ.

ವ್ಯವಸಾಯಕ್ಕೆ 2.5 ಲಕ್ಷ ರೂ. ಖರ್ಚು ಮಾಡುವ ಇವರು, ವರ್ಷಕ್ಕೆ 6ರಿಂದ 7 ಲಕ್ಷ ರೂ. ಆದಾಯ ಕಾಣುತ್ತಾರೆ. ಈಗಾಗಲೇ ತೆಂಗಿನ ಗಿಡ, ಮರಗಳನ್ನು ನೆಡಲು ಲಕ್ಷಾಂತರ ರೂ. ಖರ್ಚು ಮಾಡಿರುವ ಇವರಿಗೆ ಇನ್ನು ನಾಲ್ಕು ವರ್ಷ ಕಳೆದರೆ 50 ಲಕ್ಷ ರೂ. ಆದಾಯ ಕಾಣುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಜೀವಾಮೃತ ಬಳಕೆ: ಇವರು ತಮ್ಮ ಜಮೀನಿನಲ್ಲಿ ಬೆಳೆಯುವ ಯಾವುದೇ ಬೆಳೆಗೆ (ಅಗತ್ಯ ಸಂದರ್ಭದಲ್ಲಿ ಹೊರತುಪಡಿಸಿ) ರಾಸಾಯನಿಕ ಗೊಬ್ಬರ ಹಾಗೂ ಔಷಧ ಬಳಸದೆ ತಾವೇ ಸಗಣಿ ಮತ್ತು ಗಂಜಲದಿಂದ ತಯಾರಿಸಿದ ಜೀವಾಮೃತ ಗೊಬ್ಬರ ಬಳಸಿ ಮಣ್ಣಿನ ಫಲವತ್ತತೆ ಕಾಪಾಡುವ ಜತೆಗೆ ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಯುತ್ತಾರೆ.

ಎತ್ತುಗಳಿಂದ ಉಳುಮೆ: ಯಾಂತ್ರೀಕರಣ ಸಂದರ್ಭದಲ್ಲಿ ಇವರು ಯಾವುದೇ ಯಂತ್ರಗಳನ್ನು ಬಳಸದೆ ಎತ್ತುಗಳ ಮೂಲಕ ಉಳುಮೆ ಮಾಡಿ ಬೆಳೆ ಬೆಳೆಯುವುದು ಮತ್ತೊಂದು ವಿಶೇಷ. ಮೇವು ಕತ್ತರಿಸುವ ಒಂದು ಯಂತ್ರವನ್ನು ರಿಯಾಯಿತಿ ದರದಲ್ಲಿ ಖರೀದಿಸಿರುವುದನ್ನು ಬಿಟ್ಟರೆ ಇವರು ಯಾವುದೇ ಕೃಷಿ ಪರಿಕರಗಳನ್ನು ಕೃಷಿ ಇಲಾಖೆಯ ಸಹಾಯ ಪಡೆಯದೆ ತಮ್ಮ ಸ್ವಂತ ಹಣದಿಂದ ಕೊಂಡುಕೊಂಡಿದ್ದಾರೆ.

ತುರ್ತು ಸಂದರ್ಭದಲ್ಲಿ ಜಮೀನಿನ ಕೆಲಸಕ್ಕೆ ಕೂಲಿಯಾಳುಗಳನ್ನು ಕರೆದುಕೊಳ್ಳುವ ಇವರು, ಬೇರೆ ಸಂದರ್ಭದಲ್ಲಿ ಪತ್ನಿ ಲೀಲಾವತಿ, ಮಗ ಹೇಮಂತ್ ಜತೆಗೂಡಿ ತಮ್ಮ ಜಮೀನಿನ ಕೆಲಸ ತಾವೇ ಮಾಡಿಕೊಳ್ಳುತ್ತಾರೆ. ಪ್ರತಿದಿನ ಸಂಜೆ ಮತ್ತು ಬೆಳಗ್ಗೆ ಸುರೇಶ್ ಅವರ ಪತ್ನಿ ಹಸುಗಳಿಂದ ಹಾಲು ಕರೆದರೆ ಮಗ ಆ ಹಾಲನ್ನು ಡೇರಿಗೆ ಹಾಕಿ ಕಾಲೇಜಿಗೆ ತೆರಳುತ್ತಾನೆ. ಅದೇ ರೀತಿ ಪ್ರತಿದಿನ ಸುರೇಶ್ ಏಳು ಹಸುಗಳ ಸಗಣಿ ಬಾಚಿ ತಿಪ್ಪೆಗೆ ಹಾಕಿ, ಏಳು ಹಸುಗಳಿಗೆ ಮೈ ತೊಳೆದು ಕೊಟ್ಟಿಗೆ ಸ್ವಚ್ಛ ಮಾಡಿ ವೃತ್ತಿಗೆ ತೆರಳುತ್ತಾರೆ. ಇದು ಇವರ ದೈನಂದಿನ ಕಾಯಕ.

ಇವರು ತಮ್ಮ ಮನೆಗೆ ಬೇಕಾದ ಎಲ್ಲ ದವಸ ಧಾನ್ಯ, ಕಾಳು ಕಡ್ಡಿ, ತರಕಾರಿ ಎಲ್ಲವನ್ನೂ ತಮ್ಮ ಜಮೀನಿನಲ್ಲಿಯೇ ಬೆಳೆದುಕೊಳ್ಳುತ್ತಾರೆ. ಇವರು ಸಾಂಪ್ರದಾಯಿಕ ರಾಗಿ ತಳಿಯನ್ನು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿ ಒಂದು ಎಕರೆಯಲ್ಲಿ ಸುಮಾರು 20 ರಿಂದ 25 ಕ್ವಿಂಟಾಲ್ ರಾಗಿಯನ್ನು ಬೆಳೆದು ಮನೆಗೆ ಬಳಸಿಕೊಳ್ಳುತ್ತಿದ್ದಾರೆ. ಯೋಜಿತವಾಗಿ ವ್ಯವಸಾಯ ಮಾಡಿ ಬೆಳೆ ಬೆಳೆದರೆ ಯಾವ ರೈತ ಕೂಡ ಸಾಲದ ಸುಳಿಗೆ ಸಿಲುಕುವುದಿಲ್ಲ, ಜಮೀನಿಗಾಗಿ ಸಾಲ ಮಾಡಿ ಯಾವ ರೈತ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಈ ರೈತ ಕುಟುಂಬ ತೋರಿಸಿಕೊಟ್ಟಿದೆ. ಅಲ್ಲದೆ ಇತರ ರೈತರಿಗೆ ಸ್ಫೂರ್ತಿಯಾಗಿದ್ದಾರೆ.

ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬೆಳೆ ಬೆಳೆದರೆ ಯಾವ ರೈತ ಕೂಡ ಸಂಕಷ್ಟಕ್ಕೆ ಸಿಲುಕುವುದಿಲ್ಲ. ಮಳೆ ಅಭಾವದಿಂದ ಒಂದು ವರ್ಷ ಬೆಳೆ ಕೈ ಕೊಡಬಹುದು. ಆದರೆ ಪ್ರತಿ ವರ್ಷ ಹಾಗೆಯೇ ಇರುವುದಿಲ್ಲ. ಶ್ರಮವಹಿಸಿ ದುಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಮ್ಮ ರೈತರು ಒಂದೇ ಬೆಳೆಗೆ ಒಗ್ಗಿಕೊಳ್ಳದೆ ಮಿಶ್ರ ಬೇಸಾಯಕ್ಕೆ ಒತ್ತು ಕೊಡಬೇಕು. ಆಗ ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದು ಬೆಳೆ ಕೈ ಹಿಡಿಯುತ್ತದೆ. ಜತೆಗೆ ಹೈನುಗಾರಿಕೆ ಮಾಡಿದರೆ ಪ್ರತಿದಿನ ಹಣ ನೋಡಬಹುದು.
ಟಿ. ಸುರೇಶ್, ಪೊಲೀಸ್ ಹೆಡ್‌ಕಾನ್‌ಸ್ಟೇಬಲ್, ಚಕ್ಕೋಡನಹಳ್ಳಿ