ಕೃಷಿ ಯಂತ್ರೋಪಕರಣಕ್ಕೆ ಆದ್ಯತೆ ನೀಡುವ ರೈತ ಶಕ್ತಿಯನ್ನು ರೂಪಿಸಲಾಗಿದೆ. ಡಿಸೇಲ್ ಸಬ್ಸಿಡಿ ಎಕರೆಗೆ 250 ರೂ. ನೀಡುವುದು ರೈತರಲ್ಲಿ ಹೊಸ ಚೈತನ್ಯ ತರುತ್ತದೆ. ಯಂತ್ರೋಪಕರಣ ಬಳಕೆಯಿಂದ ಕೊಯ್ಲೋತ್ತರ ನಷ್ಟವನ್ನು ತಗ್ಗಿಸಬಹುದಾಗಿದೆ. ರೈತರ ಆದಾಯವನ್ನು 2022ರೊಳಗೆ ದುಪ್ಪಟ್ಟು ಮಾಡಲು ಕೇಂದ್ರ ಸರ್ಕಾರ ಅಂದಾಜು ಮಾಡಿತ್ತು. ಆದರೆ ಈಗ ಗಮನಿಸಿದಾಗ ಈ ವರ್ಷದೊಳಗೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ. ಬೊಮ್ಮಾಯಿ ಅವರು ತಮ್ಮ ಬಜೆಟ್ನಲ್ಲಿ ಅನೇಕ ಯೋಜನೆಗಳ ಮೂಲಕ ರೈತರ ಆದಾಯ ದುಪ್ಪಟ್ಟು ಮಾಡುವುದಕ್ಕೆ ಆದ್ಯತೆ ನೀಡಿದ್ದಾರೆ. ಸೆಕೆಂಡರಿ ಕೃಷಿ ನಿರ್ದೇಶನಾಲಯ ರೈತರ ಆದಾಯ ಹೆಚ್ಚಿಸಲು ಪೂರಕವಾಗಿದೆ. ಇದುವರೆಗೂ ಕೃಷಿ ಉತ್ಪಾದನೆ ಹೆಚ್ಚಿಸಲು ನೋಡುತ್ತಿದ್ದೆವು. ಮಾರುಕಟ್ಟೆ ಕಡೆ ಆದ್ಯತೆ ನೀಡಿರಲಿಲ್ಲ. ಆದರೆ ಈಗ ಪ್ರತಿ ಜಿಲ್ಲೆಯಲ್ಲಿ ಮಿನಿ ಆಹಾರ ಪಾರ್ಕ್ಗಳನ್ನು ಸ್ಥಾಪಿಸುವುದರಿಂದ ಮೌಲ್ಯವರ್ಧನೆಗೆ, ಬ್ರಾ್ಯಂಡಿಂಗ್ಗೆ ಅನುಕೂಲವಾಗುತ್ತದೆ. ಅದರಲ್ಲೂ ಪಿಪಿಪಿ ಮಾದರಿಯನ್ನು ತಂದಿರುವುದರಿಂದ ಲಾಭದ ಕಡೆ ಹೋಗಿ ರೈತರಿಗೂ ಬೆಲೆ ಸಿಗುತ್ತದೆ. ರೈತ ಉತ್ಪಾದಕ ಸಂಘಗಳಿಗೆ ಪೂರಕವಾಗಿರುತ್ತದೆ. ಆ ದೃಷ್ಟಿಯಿಂದ ನೋಡಿದಾಗ ಇದೊಂದು ಉತ್ತಮ ಬಜೆಟ್. ನೈಸರ್ಗಿಕ ಕೃಷಿ, ಸಾವಯವ ಕೃಷಿಗೆ ಒತ್ತು ನೀಡಲಾಗಿದೆ. ಕೃಷಿಯನ್ನು ರಾಸಾಯನಿಕದಿಂದ ಮುಕ್ತಗೊಳಿಸುವ ಮೂಲಕ ಭೂಮಿಯ ಫಲವತ್ತತೆಯನ್ನು ಉಳಿಸಿಕೊಳ್ಳಲು ಇದರಿಂದ ಸಹಾಯವಾಗುತ್ತದೆ. ಇದರ ಬೆಳವಣಿಗೆ ನಮಗೆ ತಕ್ಷಣಕ್ಕೆ ಗೋಚರಿಸದಿದ್ದರೂ ಭವಿಷ್ಯದಲ್ಲಿ ಕಾಣಬಹುದಾಗಿದೆ. ಕಫೆಕ್ ಮೂಲಕ ರೈತರ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡುವುದು ಉತ್ತಮ ಕ್ರಮ. ನೀರಾವರಿಗೆ ಸಾಕಷ್ಟು ಆದ್ಯತೆ ನೀಡಲಾಗಿದೆ. ಅನೇಕ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ನೀರಾವರಿಗೆ ನೀಡುವ ಆದ್ಯತೆಯ ಲಾಭ ಕೊನೆಗೆ ಸಿಕ್ಕುವುದು ರೈತರಿಗೆ ತಾನೇ?
ಹೈನೋದ್ಯಮ ಹಾಗೂ ಮತ್ಸ್ಯ ಉದ್ಯಮ ಕ್ಷೇತ್ರಕ್ಕೆ ಉತ್ತಮ ನೆರವನ್ನು ಬೊಮ್ಮಾಯಿ ಅವರು ನೀಡಿದ್ದಾರೆ. ಕೃಷಿಗೆ ಪೂರಕವಾಗಿ ಈ ಚಟುವಟಿಕೆಗಳು ರೈತರ ಆದಾಯವನ್ನು ಹೆಚ್ಚು ಮಾಡಲಿವೆ. ರೇಷ್ಮೆಗೂ ಆದ್ಯತೆ ನೀಡಿರುವುದರಿಂದ ನಶಿಸುತ್ತಿದ್ದ ರೇಷ್ಮೆಯನ್ನು ಉಳಿಸಲು ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ. ಒಟ್ಟಾರೆ ಕೃಷಿ ಹಾಗೂ ಪೂರಕ ವಲಯಗಳಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಯನ್ನು ಈ ಬಜೆಟ್ನಿಂದ ನಾವು ನಿರೀಕ್ಷೆ ಮಾಡಬಹುದಾಗಿದೆ.