ಕಡೂರು: ತಾಲೂಕಿನಾದ್ಯಂತ ಮುಂಗಾರು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಲ್ಲಿ ಹಿನ್ನಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ಮೂಡಿಗೆರೆ ಮತ್ತು ಹಿರಿಯೂರು ಭಾಗದ ತಂಡವು ತಾಲೂಕಿನ ಗ್ರಾಮೀಣ ಭಾಗದ ಕೃಷಿ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.
ವಿಜಯವಾಣಿ ದಿನಪತ್ರಿಕೆಯು ಮಳೆಬೆಳೆ ಕುರಿತಾಗಿ ಜು.8ರ ಸಂಚಿಕೆಯಲ್ಲಿ ಮಳೆ ಕೊರತೆಗೆ ಚಿಗುರೊಡೆಯದ ಬೆಳೆ ಎಂಬ ಶೀರ್ಷಿಕೆಯಡಿ ತಾಲೂಕಿನಲ್ಲಿ ಪೂರ್ವ ಮುಂಗಾರಿನ ಲ ಬಯಲುಸೀಮೆ ಭಾಗಕ್ಕೆ ಲಭಿಸದಿರುವ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದ ಪರಿಣಾಮ ಜಿಲ್ಲಾಧಿಕಾರಿ ಅವರ ಮೌಖಿಕ ಆದೇಶದೊಂದಿಗೆ ಜಿಲ್ಲಾ ಕೃಷಿ ಇಲಾಖೆ ವಿಜ್ಞಾನಿಗಳ ತಂಡ ಬಯಲುಸೀಮೆ ಪ್ರದೇಶದ ಕಡೂರು, ಅಜ್ಜಂಪುರ, ಸಖರಾಯಪಟ್ಟಣ ಹೋಬಳಿ ಭಾಗದ ಬಿತ್ತನೆಯಾಗಿರುವ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ವ್ಯತ್ಯಾಸ ಹಾಗೂ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದರು.
ತಾಲೂಕಿನಲ್ಲಿ ಈಗಾಗಲೇ ಪೂರ್ವ ಮುಂಗಾರಿನಲ್ಲಿ ಕೇವಲ 5326 ಹೆಕ್ಟೇರ್‌ನಷ್ಟು ಬಿತ್ತನೆ ಕಾರ್ಯ ನಡೆದಿದ್ದು ಬಿತ್ತನೆ ಪ್ರಮಾಣ ಹಿನ್ನಡೆಯ ಕಾರಣದ ಜತೆ ಈಗಾಗಲೇ ಬಿತ್ತಿರುವ ಪೂರ್ವ ಮುಂಗಾರಿನಲ್ಲಿ ಶೇಂಗಾ, ಹತ್ತಿ, ಮೆಕ್ಕೆಜೋಳ, ಉದ್ದು, ಅಲಸಂದೆ ಮತ್ತು ಈರುಳ್ಳಿ ಬೆಳೆಗಳ ಪೈರಿನ ಪರಿಸ್ಥಿತಿಯನ್ನು ವಿಜ್ಞಾನಿಗಳ ತಂಡ ಅವಲೋಕಿಸಿತು.
ಸಮರ್ಪಕವಾಗಿ ಮಳೆ ಬೀಳದೆ ಮೋಡಕವಿದ ವಾತಾವರಣ ಮತ್ತು ಅಲ್ಲಲ್ಲಿ ತುಂತುರು ಮಳೆಯಿಂದ ಪೈರಿನ ಬೆಳವಣಿಗೆಯಲ್ಲಿ ಸಾಕಷ್ಟು ಕುಂಠಿತಗೊಂಡಿರುವ ಬಗ್ಗೆ ರೈತರು ಮಾಹಿತಿ ನೀಡಿದರು. ಹತ್ತಿ ಬಿತ್ತನೆಯಾಗಿರುವ ಪ್ರದೇಶದಲ್ಲಿ ಹತ್ತಿ ಬೆಳೆಯು ಹೂವಾಡುವ ಹಂತದಲ್ಲಿ ರಸಹೀರುವ ನುಸಿ, ಸಸ್ಯಹೇನು, ಬಿಳಿ ನೋಣದ ಕೀಟಬಾಧೆಗಳಿಂದ ಆವರಿಸಿಕೊಂಡಿದೆ. ಮೆಕ್ಕೆಜೋಳದಲ್ಲಿ ಸೈನಿಕ ಹುಳುವಿನ ಬಾಧೆ ನಿವಾರಣೆಗೆ ವಿಜ್ಞಾನಿಗಳ ತಂಡ ರೈತರಿಗೆ ಔಷಧೋಪಾಚಾರದ ಸಲಹೆ ನೀಡಿತು. ತಂಡದಲ್ಲಿ ತೋಟಗಾರಿಕೆ ಉಪನಿರ್ದೇಶಕಿ ಪೂರ್ಣಿಮಾ, ಕೃಷಿ ವಿಜ್ಞಾನಿಗಳಾದ ಡಾ. ಕುಮಾರನಾಯ್ಕ, ಡಾ. ಸುಚಿತ್ರಾ, ಡಾ. ಸುರೇಶ್‌ಕುಮಾರ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಜೀವನ್ ಶರ್ಮಾ, ತೋಟಗಾರಿಕೆ ಅಧಿಕಾರಿಗಳಾದ ತೇಜಸ್ವಿನಿ, ಕಲ್ಲೇಶ್, ಶಶಿಧರ್, ಶುಭಾ, ಪೂಜಾ ಮತ್ತಿತರರಿದ್ದರು.