ರಾಮನಗರ : ವಿವಿಧ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಡಳಿತ ಕೂಡಲೇ ಸಭೆ ಕರೆಯುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ರಾಮನಗರ ತಹಸೀಲ್ದಾರ್ ನರಸಿಂಹಮೂರ್ತಿ ಅವರಿಗೆ ಬೇಡಿಕೆಗಳ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಘಟಕದ ಅಧ್ಯಕ್ಷ ಭೈರೇಗೌಡ, ಜಿಲ್ಲೆಯ ರೈತರು ಕರೊನಾ ಸಂಕಷ್ಟದಿಂದ ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಉಚಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರ ನೀಡಬೇಕು, ಕಷಿ ಯಂತ್ರಧಾರೆ ಮೂಲಕ ಕೃಷಿ ಯಂತ್ರಗಳನ್ನು ಉಚಿತವಾಗಿ ಪೂರೈಕೆ ಮಾಡಬೇಕು.
ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸುವ ಆಮಿಷವೊಡ್ಡಿ ಪ್ರತಿ ರೈತನಿಂದ 20 ಸಾವಿರ ರೂ.ಗಳಿಗೂ ಹೆಚ್ಚು ಹಣ ಸಂಗ್ರಹಿಸಲಾಗುತ್ತಿದೆ. ಆದರೆ ಹಳೆಯ ಪರಿವರ್ತಕಗಳನ್ನು ಬದಲಿಸಿದರೂ ಹೊಸ ಪರಿವರ್ತಕಗಳನ್ನು ಅಳವಡಿಸದೇ ರೈತರಿಗೆ ಮೋಸ ಮಾಡಿರುವ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ರೈತರ ಸಮಸ್ಯೆ ಬಗೆಹರಿಸಿಕೊಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಖರೀದಿ ಕೇಂದ್ರ ಆರಂಭಿಸಿ ರಾಗಿ ಖರೀದಿ ಮಾಡಲಾಗಿದೆ. ಆದರೆ 3-4 ತಿಂಗಳು ಕಳೆದರೂ ಖರೀದಿ ಹಣ ಪಾವತಿಸಿಲ್ಲ. ಕೂಡಲೇ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು. ರೈತರನ್ನು ಮುಂಚೂಣಿ ವಾರಿಯರ್ಸ್‌ಗಳೆಂದು ಪರಿಗಣಿಸಿ ಕೋವಿಡ್ ನಿಯಮಾನುಸಾರ ಪರಿಹಾರ ನೀಡಬೇಕು ಎಂದರು.
ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ರೈತರಿಗೆ ಗಾಯದ ಮೇಲೆ ಬರೆ ಹಾಕಿದ ರೀತಿಯಲ್ಲಿ ಹಾಲು ಖರೀದಿ ದರ ಕಡಿಮೆ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಜಿಲ್ಲೆಯ ಭೂಮಾಪನ ಇಲಾಖೆಯಲ್ಲಿ ರೈತರ ಕೆಲಸಗಳು ವಿಳಂಬವಾಗುತ್ತಿದೆ. ಇದರಿಂದ ರೈತರಿಗೆ ಕಷಿಯಲ್ಲಿ ತೊಡಗಿಸಿಕೊಳ್ಳಲು ಅನಾನುಕೂಲವಾಗಿದೆ. ಆದ್ಯತೆ ಮೇಲೆ ರೈತರ ಕೆಲಸಗಳನ್ನು ಮಾಡಿಕೊಡುವಂತೆ ಇಲಾಖೆಗೆ ಸೂಚಿಸಬೇಕು ಎಂದು ಬೈರೇಗೌಡ ಒತ್ತಾಯಿಸಿದರು.
ಗಣಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಜಿಲ್ಲೆಯಲ್ಲಿ ಆಕ್ರಮ ಗಣಿಗಾರಿಕೆ ತಲೆಯೆತ್ತಿದ್ದು, ಇದರಿಂದ ರೈತಾಪಿ ವರ್ಗಕ್ಕೆ ನಷ್ಟವಾಗುತ್ತಿದೆ. ಅಕ್ರಮ ಅವೈಜ್ಞಾನಿಕ ಗಣಿಗಾರಿಕೆಗೆ ಕಡಿವಾಣ ಹಾಕಬೇಕು, ಜಿಲ್ಲೆಯ ಬಗರ್‌ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆವತಿಯಿಂದ ಆಗುತ್ತಿರುವ ಕಿರುಕುಳ ತಪ್ಪಿಸಿ 1980ರ ಅರಣ್ಯ ಕಾಯ್ದೆ ಪ್ರಕಾರ ರೈತರ ಜಮೀನುಗಳಿಗೆ ಮಂಜೂರಾತಿ ದಾಖಲೆಗಳನ್ನು ಕೊಟ್ಟು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷೆ ಅನುಸೂಯಮ್ಮ, ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ್, ಮುಖಂಡರಾದ ಗೋವಿಂದರಾಜು, ಕಷ್ಣಪ್ಪ, ಶಿವಕುಮಾರಸ್ವಾಮಿ, ಲೋಕೇಶ್, ಸೈಯದ್ ಉಲ್ಲಾ ಖಾನ್, ನಾಗಮ್ಮ, ರಾಮಚಂದ್ರಯ್ಯ ಮುಂತಾದವರು ಭಾಗವಹಿಸಿದ್ದರು.
ರೈತರ ಸಮಸ್ಯೆ ಆಲಿಸಲು ಜಿಲ್ಲಾಢಳಿತ ಕೂಡಲೇ ರೈತ ಮುಖಂಡರ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿ ರಾಮನಗರ ತಹಸೀಲ್ದಾರ್ ನರಸಿಂಹಮೂರ್ತಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.