ಕೃಷಿ ಉತ್ಪನ್ನಗಳ ಮೇಲಿನ ಜಿಎಸ್‌ಟಿ ರದ್ದು ಮಾಡಿ, ರೈತ ಉತ್ಪಾದಕ ಸಂಸ್ಥೆಗಳ ವರಮಾನ ತೆರಿಗೆ ಹಾಗೂ ಎಂಐಟಿ ತೆರಿಗೆ ಕಾನೂನು ರದ್ದು ಮಾಡುವಂತೆ ರಾಜ್ಯ ರೈತ ಸಂಘಟನೆಗಳ ಒಕ್ಕೂಟದಿಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಯಿತು.
ನಗರದ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೈಸೂರು ಸಂಗೀತ ಸುಗಂಧ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸಿದ್ದ ವೇಳೆ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗಹರಿಸುವಂತೆ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರು ಮನವಿ ಮಾಡಿದರು.
ರೈತರು ಕೃಷಿ ಬಳಕೆಗೆ ಖರೀದಿಸುವ ಹನಿ ನೀರಾವರಿ ಕೊಳವೆಗಳು, ಕೀಟನಾಶಕ, ರಸಗೊಬ್ಬರಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವುರಿಂದ ಬೆಲೆ ಹೆಚ್ಚಾಗುತ್ತಿದೆ. ಇದು ರೈತರಿಗೆ ನುಂಗಲಾರದ ತುತ್ತಾಗಿದೆ. ಇದನ್ನು ರದ್ದು ಮಾಡಬೇಕೆಂದು ಹಲವಾರು ವರ್ಷಗಳಿಂದ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ತಾವು ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೃಷಿ ಉಪಕರಣಗಳ ಖರೀದಿಯ ಮೇಲೆ ಜಿಎಸ್‌ಟಿ ರದ್ದು ಮಾಡಬೇಕು. ಕೃಷಿ ಸಾಲಕ್ಕೆ ರೈತರ ಸಿಬಿಲ್ ಸ್ಕೋರ್ ಪರಿಗಣಿಸುವ ನಿಯಮ ರದ್ದು ಮಾಡಿ, ಕೃಷಿ ಸಾಲ ವಸೂಲಿಗೆ ಬ್ಯಾಂಕುಗಳು ರೈತರ ಜಮೀನು ಮುಟ್ಟುಗೋಲು ಹಾಕಿ ಹರಾಜು ಮಾಡುವ ಸರ್ಫೈಸಿ ಕಾಯ್ದೆ ರದ್ದು ಮಾಡಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಮಹಿಳಾ ಸ್ವಸಹಾಯ ಸಂಘಗಳಿಗೆ ಖಾಸಗಿ ಫೈನಾನ್ಸ್‌ಗಳು ವಸೂಲಾತಿ ಕಿರುಕುಳ ನೀಡುತ್ತಿರುವುದಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ಜಾರಿಗೆ ತನ್ನಿ. ಕೇಂದ್ರ ಸರ್ಕಾರ ರೈತ ಉತ್ಪಾದಕ ಸಂಸ್ಥೆಗಳನ್ನು ಆರಂಭಿಸಲು ಪ್ರೋತ್ಸಾಹ ಧನ ನೀಡಿದೆ. ಆದರೆ, ಈ ಉತ್ಪಾದಕ ಸಂಸ್ಥೆಗಳಿಗೆ ವರಮಾನ ತೆರಿಗೆ ವಿಧಿಸಲಾಗುತ್ತಿದೆ. ಎಂಎಟಿ ತೆರಿಗೆ ಪಾವತಿಸಬೇಕೆಂದು ಈಗಾಗಲೇ ನೂರಾರು ರೈತ ಉತ್ಪಾದಕ ಸಂಸ್ಥೆಗಳಿಗೆ ವಸೂಲಾತಿ ನೋಟಿಸ್ ನೀಡಲಾಗಿದೆ. ಇದರಿಂದ ನಷ್ಟದಲ್ಲಿರುವ ರೈತ ಉತ್ಪಾದಕ ಸಂಸ್ಥೆಗಳ ಮುಖ್ಯಸ್ಥರು ಚಿಂತಾಕ್ರಾಂತರಾಗಿದ್ದಾರೆ. ಕೇಂದ್ರ ಸರ್ಕಾರ ರೈತರಿಂದಲೇ ರೈತರಿಗಾಗಿ ಆರಂಭವಾಗಿರುವ ಸಹಕಾರ ಸಂಘಗಳಿಗೆ ತೆರಿಗೆ ವಿನಾಯಿತಿ ನೀಡಿದೆ. ಆದರೆ, ರೈತರಿಂದಲೇ ರೈತರಿಗಾಗಿ ಕಂಪನಿ ಕಾಯ್ದೆಯಲ್ಲಿ ಆರಂಭವಾಗಿರುವ ಉತ್ಪಾದಕ ಸಂಸ್ಥೆಗಳಿಗೆ ಎಂಎಟಿ ತೆರಿಗೆ, ವರಮಾನ ತೆರಿಗೆ ವಿಧಿಸುವುದು ನ್ಯಾಯವಲ್ಲ ಎಂದರು.
ಮನವಿ ಪತ್ರ ಸ್ವೀಕರಿಸಿದ ನಿರ್ಮಲಾ ಸೀತಾರಾಮ್, ಕೃಷಿ ಚಟುವಟಿಕೆ ಮಾಡುವ ರೈತರಿಗೆ ಯಾವುದೇ ತೆರಿಗೆ ವಿಧಿಸಿಲ್ಲ. ಜಿಎಸ್‌ಟಿ ಬಗ್ಗೆ ನಿಮ್ಮ ರಾಜ್ಯದ ಸಚಿವರು ಮಂಡಳಿ ಸಭೆಯಲ್ಲಿ ಚರ್ಚೆ ಮಾಡಲು ಅವಕಾಶವಿದೆ. ರೈತ ಉತ್ಪಾದಕ ಸಂಸ್ಥೆಗಳಿಗೆ ಎಂಎಟಿ ತೆರಿಗೆ ಕೂಡ ಇಲ್ಲ. ಇಲಾಖೆ ವತಿಯಿಂದ ನೋಟಿಸ್ ಬಂದಿದ್ದರೆ ದಾಖಲೆ ಕೊಡಿ ಎಂದರು.
ಈ ವೇಳೆ ಸ್ಥಳದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮಹದೇವಪ್ಪ, ಮೈಕ್ರೋ ಫೈನಾನ್ಸ್‌ಗಳು ಮಹಿಳಾ ಸಂಘಗಳಿಗೆ ಸಾಲ ನೀಡಿ ಕಿರುಕುಳ ನೀಡುತ್ತಿವೆ. ಇದನ್ನು ತಪ್ಪಿಸಲು ವಿಶೇಷ ಕಠಿಣ ಕಾನೂನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸುವುದಾಗಿ ತಿಳಿಸಿದರು.
ರೈತ ಮುಖಂಡರಾದ ಹತ್ತಳ್ಳಿ ದೇವರಾಜ್, ಬರಡನಪುರ ನಾಗರಾಜ್, ಮಾರ್ಬಳ್ಳಿ ನೀಲಕಂಠಪ್ಪ, ಕುರುಬೂರು ಸಿದ್ದೇಶ್, ಲಕ್ಷ್ಮಿಪುರ ವೆಂಕಟೇಶ್, ಅಂಬಳೆ ಮಂಜುನಾಥ್, ಕುರುಬೂರು ಪ್ರದೀಪ್, ಕಾಟೂರ್ ನಾಗೇಶ್, ಬನ್ನೂರ್ ಸೂರಿ ಇದ್ದರು.