ನ್ಯೂಸ್

ಕೃತಿಗಳ ಮೂಲಕ ಕವಿಗಳ ಸದಾ ಜೀವಂತ- ಎಚ್‌. ಸತ್ಯಪ್ರಸಾದ್‌

ಕೃತಿಗಳ ಮೂಲಕ ಕವಿಗಳು ಸದಾ ಜೀವಂತವಾಗಿರುತ್ತಾರೆ ಎಂದು  ವಿಜಯವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್‌. ಸತ್ಯಪ್ರಸಾದ್ ಹೇಳಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌  ನಗರದ ಸರಸ್ವತಿಪುರಂ ವಿಜಯವಿಠಲ ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಎಸ್‌.ಎಲ್‌. ವರಲಕ್ಷ್ಮೀ ಮಂಜುನಾಥ್‌ ಅವರ ಭಾವ ಶರಧಿ ಕವನ ಸಂಕಲನ ಕುರಿತು ಮಾತನಾಡಿದ ಅವರು, ಕವಿಗಳಿಗೆ ಸಾವಿಲ್ಲ ಎಂದರು.

ವರಲಕ್ಷ್ಮೀ ಮಂಜುನಾಥ್‌  ಅವರು ಗದ್ಯ ಹಾಗೂ ಪದ್ಯ ಎರಡಲ್ಲೂ ಸಾಹಿತ್ಯ ರಚಿಸಿದ್ದಾರೆ. ಅವರ ಕವನಗಳಲ್ಲಿ ನವರಸ ಇದೆ. ಹಾಸ್ಯ ಸ್ಥಾಯಿಭಾವ ಆದಲ್ಲಿ ಕವಿ ಪ್ರಸ್ತುತವಾಗುತ್ತಾನೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌. ಮಹಾ ಸಂತ ಸ್ವಾಮಿ ವಿವೇಕಾನಂದ ಸೇರಿದಂತೆ ಹಲವಾರು ಮಹನೀಯರ ಜೀವನ ದರ್ಶನವನ್ನು ಒಂದು ಪುಟದಲ್ಲಿ ಮಾಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ಬೇರೆ ಬೇರೆ ವಿಷಯಗಳನ್ನು ಕುರಿತು ಸಾಮಾಜಿಕ ಕಾಳಜಿಯಿಂದಲೇ ಬರೆದಿದ್ದಾರೆ ಎಂದು ಅವರು ಶ್ಲಾಘಿಸಿದರು.

ಮತದಾನದ ಬಗ್ಗೆಯೂ ಬರೆದು ಜಾಗೃತಿ ಮೂಡಿಸಿದ್ದಾರೆ. ಪ್ರತಿಯೊಬ್ಬರೂ ಮತದಾನ ಮಾಡಬೇಕೆ ಹೋರತು 'ಮತಿ ದಾನ'  ಮಾಡಬಾರದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮಗೆ ಸರಿಕಂಡವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಶಾಲಾ- ಕಾಲೇಜುಗಳ ಗ್ರಂಥಾಲಯಗಳಲ್ಲಿ ಬುಕ್‌ ಟಾಕ್‌  ಏರ್ಪಡಿಸಬೇಕು. ಆ ಮೂಲಕ ಪುಸ್ತಕ ಓದುವ ಬಗ್ಗೆ ಆಸಕ್ತಿ ಉಂಟು ಮಾಡಬೇಕು.  ಎಲ್ಲಾ ಬಾಷೆಗಳು ಗೊತ್ತಿರಬೇಕು. ಆದರೆ ಕನ್ನಡ ಹೃದಯಕ್ಕೆ ಹತ್ತಿರವಾಗಿರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌  ಅವರು,  ವಿಚಾರ ಮಂಜರಿ- ವ್ಯಕ್ತಿ- ವಿಚಾರ- ಸಂಸ್ಕೃತಿ ಕುರಿತ ಲೇಖನಗಳ ಸಂಕಲನ ಕುರಿತು ಮಾತನಾಡಿ, ಎಸ್‌.ಎಲ್‌. ವರಲಕ್ಷ್ಮೀ ಮಂಜುನಾಥ್‌ ಅವರ ಆಳವಾದ ಅಧ್ಯಯನ, ಅಸಾಮಾನ್ಯ ಗ್ರಹಣಾಶಕ್ತಿ, ಎಲ್ಲಾ ಲೇಖನಗಳಲ್ಲೂ ಗೋಚರವಾಗುತ್ತದೆ.  ನಮ್ಮ ಮಹಾಪುರುಷರು, ಹಬ್ಬ ಹರಿದಿನಗಳು, ಸಂಸ್ಕೃತಿಯ ಬಗ್ಗೆ ತಿಳಿಯಬಹುದು ಎಂದರು.

 ಜೀವನರಾಗ- ಕಥಾ ಸಂಕಲನ ಕುರಿತು  ನಂಜನಗೂಡು ಜೆಎಸ್ಎಸ್‌ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೊತ್ತಲವಾಡಿ ಶಿವಕುಮಾರ್‌ ಮಾತನಾಡಿ,

ಜನಪ್ರಿಯತೆಗಿಂತ ಜನಮನ್ನಣೆ ಪಡೆಯುವುದು ಮುಖ್ಯ. ಏಕೆಂದರೆ ಜನಪ್ರಿಯತೆ ಹೋಗುತ್ತದೆ. ಆದರೆ ಜನಮನ್ನಣೆ ಉಳಿಯುತ್ತದೆ ಎಂದರು.