ನ್ಯೂಸ್

ಕೃತಕ ಗರ್ಭಧಾರಣೆಗೆ ಭ್ರೂಣ ಪೂಲಿಂಗ್ ವ್ಯವಸ್ಥೆ ನೆರವು

ಕಡಿಮೆ ಸಂಖ್ಯೆಯ ಅಂಡಾಣು ಹೊಂದಿರುವವರು ಸಹಾ ಕೃತಕ ಗರ್ಭಧಾರಣೆ ಮೂಲಕ ಮಗು ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೈಗೊಂಡಿರುವ ಭ್ರೂಣ ಪೂಲಿಂಗ್ ವ್ಯವಸ್ಥೆ ನೆರವಾಗಲಿದೆ. ಹೀಗಾಗಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಜನತೆ ಇದರ ಪ್ರಯೋಜನ ಪಡೆಯಬೇಕೆಂದು ಆಸ್ಪತ್ರೆಯ ಐವಿಎಫ್ ಘಟಕದ ಮುಖ್ಯಸ್ಥೆ ಡಾ.ನಿವೇದಿತಾ ಶೆಟ್ಟಿ ಮನವಿ ಮಾಡಿದರು.

ಸಾಮಾನ್ಯವಾಗಿ 40 ವರ್ಷ ತಲುಪುತ್ತಿದ್ದಂತೆಯೇ ಮಹಿಳೆಯರಲ್ಲಿ ಅಂಡಾಣು ಉತ್ಪತ್ತಿ ಕಡಿಮೆ ಆಗುತ್ತದೆ. ಪರಿಸರದ ಪ್ರಭಾವ, ಆಹಾರ ಶೈಲಿ, ಕೆಲಸದ ಒತ್ತಡ, ಉದ್ಯೋಗ ಕಾರಣದಿಂದಾಗಿ ತಡವಾಗಿ ಮಗು ಬಯಸುವುದು, ವಿಳಂಬದ ವಿವಾಹ ಮೊದಲಾದವು ಸಹಾ ಇದಕ್ಕೆ ಕಾರಣವಾಗಲಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಎಂಬ್ರಿಯೋ ಪೂಲಿಂಗ್ ವ್ಯವಸ್ಥೆ ಮೂಲಕ ಹಲವಾರು ಬಾರಿ ಅಂಡಾಣು ಸಂಗ್ರಹಿಸಿ ಗರ್ಭಧಾರಣೆಗೆ ನೆರವಾಗಲಾಗುವುದು. ಇದು ದಂಪತಿ ತಮ್ಮದೇ ವಂಶವಾಹಿಯ ಶಿಶು ಪಡೆಯಲು, ಹೆಚ್ಚಿನ ಯಶಸ್ಸಿನ ಪ್ರಮಾಣ, ಕಡಿಮೆ ವೆಚ್ಚ, ಕಡಿಮೆ ಅಂಡಾಣು ಎಣಿಕೆ ಹೊಂದಿರುವ ಯುವ ವಯಸ್ಸಿನ ಮಹಿಳೆಯರಿಗೂ ಅನುಕೂಲ ಮೊದಲಾದ ಪ್ರಯೋಜನ ಹೊಂದಿದೆ. ಆದ್ದರಿಂದ ಆಸಕ್ತರು ಆಸ್ಪತ್ರೆಗೆ ಭೇಟಿ ನೀಡಿ ಸುಲಭವಾಗಿ, ಕೈಗೆಟಕುವ ರೀತಿಯಲ್ಲಿನ ಈ ವಿಧಾನದ ಮೂಲಕ ಸಂತಾನದ ಆಸೆ ಈಡೇರಿಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಹಾಜರಿದ್ದರು.