ನ್ಯೂಸ್

ಕೂಲಿ ಕಾರ್ಮಿಕರಿಗೆ ನಿವೇಶನ ನೀಡದಿದ್ದಲ್ಲಿ ಮತ ಬಹಿಷ್ಕಾರ

ಮಡಿಕೇರಿ: ಬಲಮುರಿ ಗ್ರಾಮದ ಲೈನ್ ಮನೆಗಳಲ್ಲಿ ವಾಸವಿರುವ ಕೂಲಿ ಕಾರ್ಮಿಕರಿಗೆ ಶೀಘ್ರದಲ್ಲಿ ನಿವೇಶನ ನೀಡುವುದರ ಜತೆಗೆ ಅಮಾಯಕರ ಮೇಲಿರುವ ಪ್ರಕರಣ ಹಿಂಪಡೆಯದೇ ಇದ್ದಲ್ಲಿ ಲೈನ್‌ಮನೆಯಲ್ಲಿ ವಾಸವಿರುವ ಸುಮಾರು ೪೦ರಷ್ಟು ಜನ ಕೂಲಿ ಕಾರ್ಮಿಕರು ಮತ ಬಹಿಷ್ಕಾರ ಮಾಡುವುದಾಗಿ ಕಾರ್ಮಿಕ ಕೆ.ಆರ್. ಕವನ್ ಎಚ್ಚರಿಕೆ ನೀಡಿದರು.
ಬಲಮುರಿ ಗ್ರಾಮದ ಲೈನ್ ಮನೆಗಳಲ್ಲಿ ಸುಮಾರು ೩೦ ವರ್ಷ ಮೇಲ್ಪಟ್ಟ ೪೦ ರಷ್ಟು ಜನ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದೆ. ಇದುವರೆಗೂ ಸರ್ಕಾರದಿಂದ ಯಾವುದೇ ಮೂಲಭೂತ ಸೌಲಭ್ಯ, ನಿವೇಶನದ ವ್ಯವಸ್ಥೆ ಮಾಡಿಲ್ಲ. ಕಾರ್ಮಿಕರೆಲ್ಲ ಸೇರಿ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಪಂಚಾಯಿತಿಗೆ ಅರ್ಜಿ ಸಲ್ಲಿಸುತ್ತ ಬಂದಿದ್ದರೂ ಇದುವರೆಗೂ ಯಾವುದೇ ರೀತಿಯ ಸ್ಪಂದನೆಗಳು ದೊರೆತಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆಗಳು ನೀಡಲಾಗುತ್ತಿದೆ ಹೊರತು ಯಾವುದು ಕಾರ್ಯರೂಪಕ್ಕೆ ಬಂದಿರುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರಾದ ಎಂ.ಎಸ್.ಮಂಜು, ಕೆ.ಪಿ.ಮಹೇಂದ್ರ, ಎಂ.ಎಸ್.ರವಿ, ಎಂ.ರಾಮರ್, ಕೆ.ವಿ.ಯೋಗನಂದ ಉಪಸ್ಥಿತರಿದ್ದರು.