ಕುಶಾಲನಗರ : ಶಾಲಾ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳು ಅನಾವರಣಗೊಳ್ಳಲು ಶಿಕ್ಷಕರು, ಪಾಲಕರು ಸಹಕಾರ ನೀಡಬೇಕು ಎಂದು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಭಾಸ್ಕರ ನಾಯಕ್ ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಕೂಡಿಗೆ ಕ್ಲಸ್ಟರ್ ಕೇಂದ್ರದ ವತಿಯಿಂದ ಕೂಡಿಗೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ, ಕಲೋತ್ಸವ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಇಂತಹ ಸ್ಪರ್ಧಾ ಕಾರ್ಯಕ್ರಮ ಅಗತ್ಯ. ಇವು ಪಠ್ಯದ ಜತೆಗೆ ಮಕ್ಕಳ ಪ್ರತಿಭಾ ಅನ್ವೇಷಣೆಗೆ ಪ್ರೇರಣೆ ನೀಡುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಪಂ ಸದಸ್ಯೆ ಮತ್ತು ತಾಲೂಕು ಕಸಾಪ ನಿರ್ದೇಶಕಿ ಜೆ.ಫಿಲೋಮಿನಾ ಮಾತನಾಡಿ, ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಕಲೋತ್ಸವಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದು ನಮ್ಮ ಜವಾಬ್ದಾರಿ ಎಂದರು.
ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ.ಸದಾಶಿವಯ್ಯ ಪಲ್ಲೇದ ಮಾತನಾಡಿ, ಎರಡು ದಶಕಗಳ ಹಿಂದೆ ಆರಂಭಗೊಂಡ ಪ್ರತಿಭಾ ಕಾರಂಜಿ ಸ್ಪರ್ಧೆಗಳು ಅನೇಕ ಕ್ರಿಯಾಶೀಲ ವಿದ್ಯಾರ್ಥಿಗಳನ್ನು ರೂಪಿಸಿದೆ ಎಂದರು.
ಮದಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಕೆ.ಕೆ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು