ಎನ್.ಆರ್.ಪುರ ತಾಲೂಕು ಕುಸುಬೂರು ಗ್ರಾಮದ ಭಾಸ್ಕರ ಎಂಬುವರ ಅಡಕೆ ತೋಟದಲ್ಲಿ ಆನೆ ದಾಳಿಯಿಂದ ಬೆಳೆ ನಾಶವಾಗಿರುವುದು. 
ನ್ಯೂಸ್

ಕುಸುಬೂರು ಗ್ರಾಮದಲ್ಲಿ ಒಂಟಿ ಸಲಗ ಕಾಟ

ಎನ್.ಆರ್.ಪುರ: ತಾಲೂಕಿನ ಮುತ್ತಿನಕೊಪ್ಪ ಗ್ರಾಪಂನ ಕುಸುಬೂರು ಗ್ರಾಮದಲ್ಲಿ ಕಳೆದ ಒಂದು ವಾರದಿಂದಲೂ ಒಂಟಿ ಸಲಗದ ಕಾಟ ಹೆಚ್ಚಾಗಿದ್ದು ಅಡಕೆ ಗಿಡಗಳನ್ನು ನಾಶ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಕುಸುಬೂರು ಗ್ರಾಮದ ಭಾಸ್ಕರ ಎಂಬುವರ ಅಡಕೆ ತೋಟಕ್ಕೆ ಕಳೆದ ಒಂದು ವಾರದಿಂದ ಪ್ರತಿದಿನವೂ ಒಂಟಿ ಸಲಗ ನುಗ್ಗಿ 60 ರಿಂದ 70 ಅಡಕೆ ಮರ ನಾಶ ಮಾಡಿದೆ. ಅಲ್ಲದೆ ರವಿ ಕುಮಾರ್ ಎಂಬುವರ ತೋಟದ ತಂತಿ ಬೇಲಿ ಮುರಿದು ಹಾಕಿದೆ. ನಟರಾಜ, ಶಶಿ, ಅಶೋಕ, ಪ್ರವೀಣ, ಪುಟ್ಟಸ್ವಾಮಿ, ಪ್ರಸನ್ನ, ಉಮೇಶ ಎಂಬುವರ ಅಡಕೆ ತೋಟಕ್ಕೂ ನುಗ್ಗಿ ಅಡಕೆ ಗಿಡ ಹಾಳುಮಾಡುತ್ತಿದೆ.

ಎಲಿೆಂಟ್ ಟಾಸ್ಕ್‌ಫೋರ್ಸ್ ತಂಡದವರು ಗ್ರಾಮಕ್ಕೆ ಭೇಟಿ ನೀಡಿ ಒಂಟಿ ಸಲಗ ಓಡಿಸಿದ್ದರು. ಆದರೂ ಮತ್ತೆ ಒಂಟಿ ಸಲಗ ಗ್ರಾಮಕ್ಕೆ ಬರುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಕೆ.ಕಣಬೂರು ಕಾಲನಿ, ಕುಸುಬೂರು ಮಧ್ಯೆ ದಟ್ಟವಾದ 50ರಿಂದ 60 ಎಕರೆ ಅರಣ್ಯವಿದ್ದು ಒಂಟಿ ಸಲಗವು ಹಗಲು ಹೊತ್ತಿನಲ್ಲಿ ಈ ಅರಣ್ಯಕ್ಕೆ ಸೇರಿಕೊಳ್ಳುತ್ತಿದೆ. ರಾತ್ರಿಯಾದ ಕೂಡಲೇ ಗ್ರಾಮಕ್ಕೆ ಬಂದು ತೋಟಕ್ಕೆ ನುಗ್ಗುತ್ತಿದೆ.

ಶನಿವಾರ ಸಂಜೆ 5.30ರ ಸುಮಾರಿಗೆ ಒಂಟಿ ಸಲಗ ಗ್ರಾಮಕ್ಕೆ ಬಂದಿದೆ. ಇದರಿಂದ ಜನರು ಭಯಭೀತರಾಗಿದ್ದಾರೆ. ಆನೆಯನ್ನು ಸೆರೆ ಹಿಡಿದು ರಕ್ಷಣೆ ನೀಡಬೇಕು ಎಂದು ಗ್ರಾಮಸ್ಥರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.