ಎಚ್.ಡಿ.ಕೋಟೆ: ಕೇರಳದ ವಯನಾಡು ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣವೂ ಕಡಿಮೆಯಾಗಿದೆ.
ಜಲಾಶಯಕ್ಕೆ 21,300 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಅಷ್ಟೇ ನೀರನ್ನೂ ನದಿಗೆ ಬಿಡಲಾಗಿದೆ. ಗುರುವಾರ ಜಲಾಶಯದ ಮಟ್ಟ 2282.46 ಅಡಿ ಇದ್ದು, ಜಲಾಶಯ ಭರ್ತಿಯಾಗಲು 1.54 ಅಡಿ ಬಾಕಿ ಇದೆ.
ಜಲಾಶಯದ ನಾಲ್ಕು ಕ್ರಸ್ಟ್ ಗೇಟ್‌ಗಳ ಮೂಲಕ 15 ಸಾವಿರ ಕ್ಯೂಸೆಕ್, ಸುಭಾಷ್ ಪವರ್ ಸ್ಟೇಷನ್ ಮೂಲಕ 5 ಸಾವಿರ ಕ್ಯೂಸೆಕ್ ಹಾಗೂ ನಾಲೆ ಮೂಲಕ 1300 ಕ್ಯೂಸೆಕ್ ಸೇರಿದಂತೆ ಒಟ್ಟು 21,300 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ಜಲಾಶಯದ ಮುಂಭಾಗದ ಸೇತುವೆ ಮುಳುಗಡೆಯಾಗಿದ್ದು, ಸೇತುವೆ ಮೇಲೆ 2 ಅಡಿ ನೀರು ಹರಿಯುತ್ತಿದೆ. ಕಬಿನಿ ಜಲಾಶಯದ ಮುಂಭಾಗದಲ್ಲಿ ವಾಸ ಮಾಡುತ್ತಿರುವ ಬಿದರಹಳ್ಳಿ ಸರ್ಕಲ್‌ನ ಗ್ರಾಮಸ್ಥರು ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆ ಆಗಿರುವ ಮಾಹಿತಿ ತಿಳಿದು ನಿಟ್ಟುಸಿರುಬಿಟ್ಟಿದ್ದಾರೆ.
2019ರಲ್ಲಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದ ಕಾರಣ 1 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟ ಸಂದರ್ಭದಲ್ಲಿ ಗ್ರಾಮದ 48 ಕುಟುಂಬಗಳು ನೀರಿನಲ್ಲಿ ಮುಳುಗಿ ಕುಟುಂಬಸ್ಥರು ನಿರಾಶ್ರಿತರಾಗಿ 15 ದಿನಗಳಲ್ಲಿ ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿಂದ ಇಲ್ಲಿಯವರೆಗೆ ಬಿದರಹಳ್ಳಿ ಸರ್ಕಲ್‌ನ ಗ್ರಾಮಸ್ಥರು ಪ್ರತಿ ವರ್ಷ ಮುಂಗಾರು ಪ್ರಾರಂಭವಾದರೆ ಸಾಕು ಆತಂಕದಲ್ಲಿ ಜೀವನ ದೂಡುತ್ತಿದ್ದಾರೆ.
ಈ ಕುಟುಂಬಗಳಿಗೆ ಬೇರೆ ಜಾಗದಲ್ಲಿ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆ ಇನ್ನೂ ಪೂರ್ಣಗೊಳ್ಳದೆ ಇರುವುದರಿಂದ ನದಿ ಪಕ್ಕದಲ್ಲಿ ಇಂದಿಗೂ ಜೀವ ಭಯದಲ್ಲಿ ಬದುಕುತ್ತಿದ್ದಾರೆ.