ಕುವೆಂಪು ತತ್ವಶಾಸ್ತ್ರ ಹಾಗೂ ಮನೋವಿಜ್ಞಾನದ ಕುರಿತು ವಿಶೇಷ ಆಸಕ್ತಿ ಹೊಂದಿದ್ದರು. ಹೀಗಾಗಿ ಅವರ ಸಾಹಿತ್ಯದ ಘಟನೆಗಳಲ್ಲಿ ಆತ್ಮಸಾಕ್ಷಾತ್ಕಾರ, ಮನೋವಿಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳು ಕಂಡುಬರುತ್ತದೆ ಎಂದು ಕುಲಪತಿ ಎನ್.ಕೆ.ಲೋಕನಾಥ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ಮನೋವಿಜ್ಞಾನ ಅಧ್ಯಯನ ವಿಭಾಗವು ಕುವೆಂಪು ಜನ್ಮ ದಿನಾಚರಣೆ ಪ್ರಯುಕ್ತ ಸೋಮವಾರ ಆಯೋಜಿಸಿದ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು.
ಈಚೆಗೆ ಒತ್ತಡದ ಜೀವನದ ನಡುವೆ ಮನೋವಿಜ್ಞಾನವನ್ನು ಕಲಿಯುವ ಆಸಕ್ತಿ ಹೆಚ್ಚಿದೆ. ಆದರೆ ಕುವೆಂಪು ಹಿಂದೆಯೇ ಈ ಬಗ್ಗೆ ತಿಳಿಸಿದ್ದು, ಅವರ ದೂರದೃಷ್ಟಿ ಚಿಂತನೆಗೆ ಹಿಡಿದ ಕೈಗನ್ನಡಿ ಎಂದು ಹೇಳಿದರು.
ಕುವೆಂಪು ಭಿನ್ನ ವ್ಯಕ್ತಿತ್ವ ಹೊಂದಿದ್ದರು. ಈ ವಿಶ್ವವಿದ್ಯಾಲಯವನ್ನು ರೂಪಿಸುವಲ್ಲಿ ಅವರ ಶ್ರಮವನ್ನು ಇಂದಿನ ವಿದ್ಯಾರ್ಥಿಗಳು ಅರಿಯಬೇಕು. ರಾಷ್ಟ್ರದಲ್ಲಿ ಕೋಲ್ಕತ್ತಾ ವಿಶ್ವವಿದ್ಯಾಲಯದ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ವಿಭಾಗ ಆರಂಭವಾಗಿತ್ತು ಎಂಬುದು ಹೆಮ್ಮೆಯ ವಿಚಾರ. ಇಲ್ಲಿನ ಪರಂಪರೆಯನ್ನು ಬೆಳೆಸುವ ಜವಾಬ್ದಾರಿ ಯುವ ಸಮುದಾಯಕ್ಕಿದೆ ಎಂದು ಹೇಳಿದರು.
ಕುವೆಂಪು ಕುಲಪತಿಗಳಾಗಿದ್ದಾಗಲೂ ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದವು. ಆದರೆ ಅವರ ಗಟ್ಟಿಯಾದ ನಿಲುವಿನ ಮುಂದೆ ಟೀಕೆಗಳು ಸತ್ತು, ಕೆಲಸಗಳಷ್ಟೇ ಉಳಿಯಿತು ಎಂದರು.
ಮನೋವಿಜ್ಞಾನ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಸಂಪತ್ತ ಕುಮಾರ್, ಹಿರಿಯ ವಿದ್ಯಾರ್ಥಿಗಳ ಸಂಘದ ಸಂಘಟನಾ ಕಾರ್ಯದರ್ಶಿ ಪಿ.ಮಂಜುನಾಥ, ಪ್ರೊ.ಮೇವಾ ಸಿಂಗ್, ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ವಿಶ್ರಾಂತ ಪ್ರಧ್ಯಾಪಕ ಎಂ.ಶ್ರೀಧರಮೂರ್ತಿ, ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಅಧ್ಯಾಪಕಿ ಜ್ಯೋತಿ ಶಂಕರ್ ಇದ್ದರು.