ನ್ಯೂಸ್

ಕುಣಿಯುತ್ತ, ನಲಿಯುತ್ತ ಬಂದ ಅಕ್ಕ-ತಂಗಿ

ಚಿತ್ರದುರ್ಗ: ಒಂದೆಜ್ಜೆ ಮುಂದಕ್ಕೆ, ಎರಡೆಜ್ಜೆ ಹಿಂದಕ್ಕೆ ಇಡುತ್ತ, ಹತ್ತಿರ ಬಂದತ್ತೆಲ್ಲ ಹಿಂದೆ ಸರಿಯುತ್ತ, ಕುಣಿಯುತ್ತ ನಲಿಯುತ್ತಿದ್ದ ಕೋಟೆನಗರಿಯ ಶಕ್ತಿದೇವತೆಗಳಾದ ಬರಗೇರಮ್ಮ ಮತ್ತು ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿಯರಿಬ್ಬರು ಪ್ರೀತಿ-ವಾತ್ಸಲ್ಯದ ಆಲಿಂಗನಕ್ಕಾಗಿ ತವಕಿಸಿದರು. ಪುನಃ ಮುಖಾಮುಖಿಯಾಗಲು ಇಬ್ಬರೂ ಒಂದು ವರ್ಷ ಕಾಯಬೇಕು. ಹೀಗಾಗಿ ಅರ್ಧ ತಾಸಿಗೂ ಅಧಿಕ ಸಮಯ ಸತಾಯಿಸಿ ಕೊನೆಗೂ ಭೇಟಿಯಾದರು…

ರಾಜಬೀದಿ ದೊಡ್ಡಪೇಟೆಯಲ್ಲಿ ಮಂಗಳವಾರ ರಾತ್ರಿ ನಡೆದ ಈ ಅಮೃತ ಗಳಿಗೆಗೆ ಅಸಂಖ್ಯಾತ ಭಕ್ತಗಣ ಸಾಕ್ಷಿಯಾದರು. ಸುಮಾರು 3 ಗಂಟೆ ಕಾದು ಭೇಟಿ ವೀಕ್ಷಿಸುವ ಮೂಲಕ ಸುಂದರ ದೃಶ್ಯ ಕಣ್ತುಂಬಿಕೊಂಡರು.

ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ದೇವಿಯನ್ನು ಬುರುಜನಹಟ್ಟಿಯ ಪಾದದ ಗುಡಿಯಲ್ಲಿ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪ್ಪಿನಘಟ್ಟಮ್ಮ ದೇವಿಯನ್ನು ಕರುವಿನಕಟ್ಟೆ ವೃತ್ತದ ಕ್ಯಾತಲಿಂಗೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಅತ್ಯಂತ ವೈಭವೋಪೇತವಾಗಿ ಭಕ್ತರ ಕಣ್ಮನ ಸೆಳೆಯುವಂತೆ ವಿವಿಧ ಪುಷ್ಪ, ವಸ್ತುಗಳಿಂದ ಅಲಂಕರಿಸುವ ವೇಳೆಯೂ ಭಕ್ತರ ದಂಡೆ ಹರಿದು ಬಂದಿತು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಭೇಟಿಯಾಗುವ ಸ್ಥಳದತ್ತ ಅರ್ಚಕರು ಕರೆತಂದರು.

ಅಕ್ಕ-ತಂಗಿಯರ ಐತಿಹಾಸಿಕ ಭೇಟಿ ಮಹೋತ್ಸವ ಎಂದೇ ಜನಜನಿತವಾಗಿರುವ ಈ ಜಾತ್ರೆ ಅಂಗವಾಗಿ ಇಡೀ ದೊಡ್ಡಪೇಟೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ವಿದ್ಯುತ್ ದೀಪಾಲಂಕಾರ ಜಗಮಗಿಸಿತು. ‘ಓಂ’ ಚಿಹ್ನೆಯೊಂದಿಗೆ ಅಲಂಕೃತಗೊಂಡ ಸ್ಥಳದಲ್ಲಿ ಕರ್ಪೂರಧಾರತಿ ಮತ್ತು ಎರಡೂ ದೇವತೆಗಳ ಅರ್ಚಕರು ಪರಸ್ಪರ ಉತ್ಸವ ಮೂರ್ತಿಗಳಿಗೆ ಪೂಜೆ ಸಲ್ಲಿಸಿದ ನಂತರ ಭೇಟಿ ನೆರವೇರಿತು. ಇದೇ ವೇಳೆ ಅಧಿದೇವತೆ ಏಕನಾಥೇಶ್ವರಿಗೆ ಜೈ, ಬರಗೇರಮ್ಮಗೆ ಜೈ, ತಿಪ್ಪಿನಘಟ್ಟಮ್ಮ ದೇವಿಗೆ ಜೈ, ಉಧೋ ಉಧೋ ಎಂಬ ಹರ್ಷೋದ್ಗಾರ ಮುಗಿಲುಮುಟ್ಟಿತು.

ಭೇಟಿಯ ಹಿನ್ನೆಲೆ: ನವದುರ್ಗೆಯರಾದ ಏಕನಾಥೇಶ್ವರಿ, ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಗೌರಸಂದ್ರ ಮಾರಮ್ಮ, ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಚೌಡಮ್ಮ, ಕುಕ್ಕವಾಡೇಶ್ವರಿ, ಬನ್ನಿ ಮಹಾಕಾಳಿ ದೇವತೆಗಳು ಚಿತ್ರದುರ್ಗದ ರಕ್ಷಕ ದೇವತೆಗಳು ಎನ್ನುವ ಪ್ರತೀತಿ ಇದೆ.

ಬುಡಕಟ್ಟು ಸಂಸ್ಕೃತಿಯ ತವರೂರಾದ ಚಿತ್ರದುರ್ಗ ಜಿಲ್ಲೆಯಲ್ಲಿ ಶಕ್ತಿದೇವತೆಗಳ ಆರಾಧನೆ ಹೆಚ್ಚು. ಅದರ ಒಂದು ಭಾಗವೇ ಅಕ್ಕ-ತಂಗಿಯರ ಭೇಟಿ ಮಹೋತ್ಸವ. ಇದಕ್ಕೂ ಕುತೂಹಲಕಾರಿ ಕಥೆಯೊಂದಿದೆ.

ಪ್ರೀತಿ-ವಾತ್ಸಲ್ಯದಿಂದಿದ್ದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಕೆಲ ಕಾರಣಗಳಿಂದ ಮುನಿಸಿಕೊಳ್ಳುತ್ತಾರೆ. ಪರಸ್ಪರ ದೂರವಾದ ಪರಿಣಾಮ ಊರಿನ ಜನರ ಉಲ್ಲಾಸ ಕುಗ್ಗುತ್ತದೆ. ಏನಾದರೂ ಮಾಡಿ ಇಬ್ಬರನ್ನು ಒಗ್ಗೂಡಿಸಲು ನವದುರ್ಗೆಯರಲ್ಲಿ ಹಿರಿಯಳಾದ ಏಕನಾಥೇಶ್ವರಿ ದೇವಿಗೆ ಭಕ್ತರು ಮೊರೆ ಹೋಗುತ್ತಾರೆ.

ಏಕನಾಥೇಶ್ವರಿ ಊರಿನ ಒಳಿತಿಗಾಗಿ ಭಕ್ತರ ಸಂತೋಷಕ್ಕಾಗಿ ವರ್ಷಕ್ಕೊಮ್ಮೆಯಾದರೂ ನಿಶ್ಚಿತ ಸ್ಥಳದಲ್ಲಿ ತನ್ನ ಸಮ್ಮುಖದಲ್ಲಿ ಅಕ್ಕ-ತಂಗಿಯರ ಭೇಟಿಯಾಗಬೇಕೆಂದು ಆಜ್ಞಾಪಿಸುತ್ತಾಳೆ. ಹಿರಿಯಕ್ಕನ ಅಣತಿಯಂತೆ ಪ್ರತಿ ವರ್ಷ ಅಕ್ಕ-ತಂಗಿಯರು ನಗರ ಸೇರಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಕ್ತರ ಮನೆಗಳಲ್ಲಿ ಎಂಟು ದಿನಗಳ ಕಾಲ ಪೂಜೆ ಸ್ವೀಕರಿಸಿ, ಪರಮಾನಂದದಿಂದ ಭಕ್ತರ ಮೊರೆಗೆ ಮನಸೋತು ಸಾವಿರಾರು ಭಕ್ತರ ಮಧ್ಯೆ ದೊಡ್ಡಪೇಟೆಯಲ್ಲಿ ಭೇಟಿಯಾಗುತ್ತಾರೆ.

ಪ್ರೀತಿ, ಮಮಕಾರದ ಸಂದೇಶವೇ ಭೇಟಿ: ದ್ವೇಷ, ಅಸೂಹೆ ಮರೆತು ಪ್ರೀತಿ, ಮಮತೆ, ಆತ್ಮೀಯತೆಯಿಂದ ಬದುಕಬೇಕು ಎಂಬ ಸಂದೇಶವೇ ಭೇಟಿ ಆಚರಣೆಯ ವಿಶೇಷ. ಇದನ್ನು ಬೆಟ್ಟದ ತುದಿಯಲ್ಲಿ ನಿಂತು ಏಕನಾಥೇಶ್ವರಿ ದೇವಿ ವೀಕ್ಷಿಸುತ್ತಾಳೆಂಬ ನಂಬಿಕೆಯೂ ಇದೆ. ಜನಪದ ಹಿನ್ನೆಲೆಯ ಈ ಮಹೋತ್ಸವ ನಗರದ ಸಾಂಸ್ಕೃತಿಕ ಹಬ್ಬವೆನಿಸಿದೆ.

ಮೈನವಿರೇಳಿಸಿದ ಉರುಮೆಯ ನಾದ: ಜಾನಪದ ಸೊಗಡಿನ ಹಿನ್ನೆಲೆಯೂ ಹೊಂದಿರುವ ಈ ಮಹೋತ್ಸವದಲ್ಲಿ ಸೋಮನ ಕುಣಿತ, ಡೊಳ್ಳುಕುಣಿತ, ದೀವಟಿಗೆ ಧಾರಿಗಳು, ಸೂರ್ಯ-ಚಂದ್ರರ ಚಿತ್ರಗಳುಳ್ಳ ಛತ್ರಿ-ಚಾಮರಗಳು, ಬೆಳಕಿನ ಪಂಜುಗಳು, ತಮಟೆಗಳ ಸದ್ದು, ಡೊಳ್ಳು ವಾದನಗಳು ಇನ್ನಷ್ಟು ಮೆರುಗು ನೀಡಿ ಗಮನ ಸೆಳೆದವು. ಉರುಮೆಯ ನಾದ ಮೈನವಿರೇಳಿಸಿತು.