ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದ ಸುತ್ತಲು ಬೇಕಾಬಿಟ್ಟಿ ಖಾಸಗಿ ಲೇಔಟ್‌ಗಳು ನಿರ್ಮಾಣವಾಗಿವೆ. ಕುಡಾ ಮುಂದಾಳತ್ವದಲ್ಲಿ ಮತ್ತೊಂದು ಲೇಔಟ್ ಏಕೆ ನಿರ್ಮಾಣ ಮಾಡಬಾರದು. ಇದರಿಂದ ನಿಮಗೇನು ನಷ್ಟ ಎಂದು ಉಸ್ತುವಾರಿ ಸಚಿವ ಬೈರತಿ ಸುರೇಶ್ ಕುಡಾ ಆಯುಕ್ತ ಶ್ರೀನಾಥ್ ರವರನ್ನು ತರಾಟೆಗೆ ತೆಗೆದುಕೊಂಡರು.
ನಗರದ ಹೊರವಲಯದ ಟಮಕದ ಕುಡಾ ಬಡಾವಣೆಯಲ್ಲಿ ಸೋಮವಾರ ೯.೮೦ ಕೋಟಿ ವೆಚ್ಚದ ರಸ್ತೆಗಳ ಕಾಮಗಾರಿ ಹಾಗೂ ಬಡಾವಣೆಗೆ ಕುಡಿಯುವ ನೀರಿನ ಬೋರ್‌ವೆಲ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಇಷ್ಟು ವರ್ಷಗಳಾದರೂ ಈ ಬಡಾವಣೆಯನ್ನು ಯಾಕೆ ಅಭಿವೃದ್ಧಿ ಮಾಡಿಲ್ಲ. ಇಷ್ಟು ನಿರ್ಲಕ್ಷ್ಯ ಮಾಡಿದರೆ ಹೇಗೆ, ಕೂಡಲೇ ಯೋಜನೆ ರೂಪಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಿ ಹಣಕ್ಕೆ ಕೊರತೆಯಿಲ್ಲ ಅನುದಾನ ಕೊಡಕ್ಕೆ ಸರ್ಕಾರ ಸಿದ್ದವಿದೆ ಎಂದರು.
ಮಧ್ಯಪ್ರವೇಶಿಸಿದ ಸಂಸದ ಮಲ್ಲೇಶ್ ಬಾಬು ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು ಮಾತನಾಡಿ, ಈ ಹಿಂದೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣದಿಂದ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುದ್ದಲಿ ಪೂಜೆಗೆ ಶುಕ್ರದೆಸೆ ಬಂದಿದೆ ಎಂದಾಗ ಸಚಿವ ಮಧ್ಯಪ್ರವೇಶಿಸಿ, ನೋಡಿ ಹಿಂದೆ ಕೇಂದ್ರ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ಕೊಟ್ಟ ಅನುದಾನವನ್ನು ವಾಪಸ್ಸು ತೆಗೆದುಕೊಂಡಿದೆ. ಈಗ ನಮ್ಮ ಕಾಂಗ್ರೆಸ್ ಸರ್ಕಾರದಿಂದ ಬಿಡುಗಡೆಯಾದ ಹಣದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಿಮಗೂ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ವಾಪಸ್ಸು ಹೋದ ಅನುದಾನವನ್ನು ಕೊಡಿಸಿಕೊಡಿ ಎಂದು ಸಚಿವ ಬೈರತಿ ಸುರೇಶ್ ಸಂಸದರಿಗೆ ತಿರುಗೇಟು ನೀಡಿದರು.
ಕುಡಾ ಲೇಔಟ್ ನಿರ್ಮಾಣವಾಗಿ ವರ್ಷಗಳೇ ಕಳೆದರು ಅಭಿವೃದ್ದಿ ಕಾಣುತ್ತಿಲ್ಲ. ನಗರದ ಸುತ್ತಲು ನಾಯಿಕೊಡೆಗಳಂತೆ ಖಾಸಗಿ ಲೇಔಟ್‌ಗಳು ನಿಯಮಗಳನ್ನು ಗಾಳಿಗೆ ತೂರಿ ನಿರ್ಮಾಣ ಮಾಡುತ್ತಿದ್ದಾರೆ. ನಗರಸಭೆ ಮತ್ತು ಕುಡಾ ಅಧಿಕಾರಿಗಳು ಮೌನವಹಿಸಿದ್ದಾರೆ. ಸರ್ಕಾರದ ವತಿಯಿಂದ ಕುಡಾ ಲೇಔಟ್‌ಗಳನ್ನು ನಿರ್ಮಾಣ ಮಾಡಿ ಬಡವರಿಗೆ ರಿಯಾಯಿತಿ ದರದಲ್ಲಿ ನಿವೇಶನಗಳನ್ನು ನೀಡುವ ಕೆಲಸ ಮಾಡಬೇಕು ಎಂದು ಸಚಿವರಲ್ಲಿ ಸಾರ್ವಜನಿಕರು ಮನವಿ ಮಾಡಿದರು.
ಸರ್ಕಾರಿ ಜಾಗವನ್ನು ಗುರ್ತಿಸಿ ಕುಡಾ ಲೇಔಟ್‌ಗಳನ್ನು ನಿರ್ಮಾಣ ಮಾಡುವಂತೆ ಕುಡಾ ಆಯುಕ್ತ ಶ್ರೀನಾಥ್ ರವರಿಗೆ ಸಚಿವ ಬೈರತಿ ಸುರೇಶ್ ಸೂಚನೆ ನೀಡಿದರು.
ಶಾಸಕ ಕೊತ್ತೂರು ಜಿ ಮಂಜುನಾಥ್, ಎಂಎಲ್ಸಿಗಳಾದ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಸದಸ್ಯೆ ಶ್ವೇತಾ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ವಿ.ಗೀತಾ, ಕುರಿಗಳ ರಮೇಶ್, ಕೋಮುಲ್ ಷಂಷೀರ್, ಇರಗಸಂಸ್ರ ವಿಶ್ವನಾಥ್, ಎಂ.ಸಿ ಫಾಲ್ಗುಣ, ಮುಂತಾದವರು ಇದ್ದರು.
ಚಿತ್ರ ೨೦ ಕೆ.ಎಲ್.ಆರ್. ೦೧ : ಕುಡಾ ಬಡಾವಣೆಯಲ್ಲಿ ೯.೮೦ ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಮತ್ತು ಕುಡಿಯುವ ನೀರಿಗೆ ಬೋರ್‌ವೆಲ್ ಕೊರೆಯಲು ಚಾಲನೆ ನೀಡಿದ ಸಚಿವ ಬೈರತಿ ಸುರೇಶ್, ಸಂಸದ ಎಂ.ಮಲ್ಲೇಶ್‌ಬಾಬು, ಶಾಸಕ ಕೊತ್ತೂರು ಮಂಜುನಾಥ್ ಮುಂತಾದವರಿದ್ದರು.