ಎಚ್.ಡಿ.ಕೋಟೆ: ಪೊಲೀಸರಿಗಾಗಿ ಕಾನೂನು ಪಾಲಿಸುವುದಲ್ಲ. ನಿಮ್ಮ ಜೀವಗಳನ್ನು ಉಳಿಸಿಕೊಳ್ಳಲಿಕ್ಕಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ ನೀವು ಕಾನೂನು ಪಾಲಿಸಬೇಕು ಎಂದು ಹುಣಸೂರು ಸಂಚಾರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕ ಪುಟ್ಟಸ್ವಾಮಿ ತಿಳಿಸಿದರು.
ಪಟ್ಟಣದ ವರದರಾಜಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್, ಪಟ್ಟಣದ ಪೊಲೀಸ್ ಠಾಣೆ ಮತ್ತು ಜಿಲ್ಲಾ ಜನ ಜಾಗೃತಿ ವೇದಿಕೆಯಿಂದ ಆಟೋ ಮತ್ತು ಗೂಡ್ಸ್ ಚಾಲಕರು ಹಾಗೂ ಮಾಲೀಕರಿಗೆ ಆಯೋಜಿಸಿದ್ದ ‘ಕಾನೂನು ಅರಿವು ಮತ್ತು ದುಶ್ಚಟಗಳ ಜಾಗೃತಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಾನೂನಿನ ಚೌಕಟ್ಟಿನಲ್ಲಿ ನಿರ್ಧರಿಸಿರುವ ನಿಯಮಗಳನ್ನು ಪಾಲಿಸಿದರೆ ಮಾತ್ರ ಸಮಾಜದ ಎಲ್ಲರೂ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಪಟ್ಟಣದ ಆರಕ್ಷಕ ನಿರೀಕ್ಷಕ ಶಬೀರ್ ಹುಸೇನ್ ಮಾತನಾಡಿ, ಕರೊನಾ ನಮಗೆ ಒಂದು ಪಾಠವನ್ನು ಕಲಿಸಿ ಹೋಗಿದೆ. ಜೀವ ಇದ್ದರೆ ಮಾತ್ರ ಜೀವನ. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ತಮ್ಮ ಜೀವನ ಸುಗಮವಾಗಲು ಸಾಧ್ಯ ಎಂದರು.
ಯೋಜನೆಯ ಜಿಲ್ಲಾ ನಿರ್ದೇಶಕ ಲಕ್ಷ್ಮಣ್, ಆರಕ್ಷಕ ನಿರೀಕ್ಷಕ ಶಬ್ಬೀರ್ ಹುಸೇನ್, ಉಪ ನಿರೀಕ್ಷಕ ರಸುಲ್ ಪಾಗೇವಾಲ, ಜನಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಚಾ. ನಂಜುಂಡಮೂರ್ತಿ, ಜನ ಜಾಗೃತಿ ಸದಸ್ಯರಾದ ಸಿ.ಎನ್. ನಾಗಣ್ಣ, ಶ್ರೀಕಾಂತ್, ಕನ್ನಡ ಪ್ರಮೋದ್, ವಿನಯ ಭಜರಂಗಿ, ಶಿವರಾಜ್, ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಭಾಸ್ಕರ್, ವಲಯದ ಮೇಲ್ವಿಚಾರಕಿ ಪವಿತ್ರಾ, ಕೃಷಿ ಮೇಲ್ವಿಚಾರಕ ರಾಜು, ಗೂಡ್ಸ್ ಮತ್ತು ಆಟೋ ಚಾಲಕರು ಮತ್ತು ಮಾಲೀಕರು ಹಾಜರಿದ್ದರು.