ನ್ಯೂಸ್

ಕುಂಬಾರಣ್ಣನ ಮಡಕೆಗೆ ಬರುವುದೇ ಬೇಡಿಕೆ? : 2 ವರ್ಷ ಲಾಕ್​ಡೌನ್​ನಿಂದ ವ್ಯಾಪಾರಕ್ಕೆ ಕಲ್ಲು, ಕುಂಬಾರಿಕೆಗೆ ಬೇಕಿದೆ ಸರ್ಕಾರದ ಪ್ರೋತ್ಸಾಹ

ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ

ಬಿಸಿಲು ಜನರನ್ನು ಹೈರಾಣಾಗಿಸುತ್ತಿದ್ದು, ಮಣ್ಣಿನ ಮಡಕೆಗಳತ್ತ ಚಿತ್ತ ಹರಿಯುತ್ತಿದೆ. 2 ವರ್ಷದಿಂದ ವ್ಯಾಪಾರವಿಲ್ಲದೆ ಕಂಗಾಲಾಗಿದ್ದ ಕುಂಬಾರರು ಈ ಬಾರಿ ನಾಲ್ಕು ಕಾಸು ನೋಡುವ ನಿರೀಕ್ಷೆಯಲ್ಲಿದ್ದಾರೆ.

ಕುಂಬಾರಿಕೆ ನೆಚ್ಚಿಕೊಂಡ ಕುಟುಂಬಗಳಿಗೆ ಬೇಸಿಗೆ ಅತ್ಯಂತ ಪ್ರಮುಖ. ಹೋಳೂರು, ಕಲ್ಲಂಡೂರು, ಚಿಟ್ನಹಳ್ಳಿ, ಗೋಪ್ಪಲ್ಲಿ, ಕುಂಟನಹಳ್ಳಿ ಸೇರಿ ಕೆಲವೇ ಗ್ರಾಮಗಳಲ್ಲಿ ಮಡಕೆ ತಯಾರಿಸಲಾಗುತ್ತಿದೆ. ಇಲ್ಲಿನ ಮಡಕೆಗಳನ್ನು ಕೋಲಾರದ ಕುಂಬಾರ ಬೀದಿ ಮತ್ತು ಪಟ್ಟಣಗಳ ಒಂದೆರಡು ಕಡೆಗಳಿಗೆ ಸರಬರಾಜು ಮಾಡುತ್ತಾರೆ. ವ್ಯಾಪಾರಸ್ಥರು 10 ರಿಂದ 50 ರೂ.ತನಕ ಲಾಭ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆ. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಆಧುನೀಕತೆಯಿಂದಾಗಿ ಮಡಕೆಗಳ ಬಳಕೆ ಕಡಿಮೆಯಾಗುತ್ತಿದ್ದು, ಕುಂಬಾರರು ಬೇರೆ ಕೆಲಸಗಳತ್ತ ಹೊರಟಿದ್ದರಿಂದ ಕುಂಬಾರಿಕೆ ಕ್ಷೀಣಿಸುತ್ತಾ ಬಂದು ಇದೀಗ ಬಹುತೇಕ ನೆಲಕಚ್ಚಿದೆ.

ಜಿಲ್ಲೆಯ ಕುಂಬಾರಿಕೆ ನಿಂತ ನೀರಾಗಿದೆ. ಸಾಂಪ್ರದಾಯಿಕ ಕಸುಬಿನಿಂದ ಕುಂಬಾರರು ಹೊರಬಂದಿಲ್ಲ ಎನ್ನುವುದಕ್ಕಿಂತ ಹೊರತರುವ ಪ್ರಯತ್ನ ಅಧಿಕಾರಸ್ಥರು ಮಾಡಿಲ್ಲ. ಚಕ್ರದ ಜಾಗದಲ್ಲಿ ಯಂತ್ರಗಳು, ಸೌದೆಗೆ ಬದಲಾಗಿ ವಿದ್ಯುತ್​ ಒಲೆಗಳ ಬಳಕೆ, ತರಬೇತಿ ಹೊಂದಿದ ನುರಿತ ಕೆಲಸಗಾರರು ಸಿಕ್ಕಿ ಕೈಗಾರಿಕೆ, ಉದ್ಯಮವಾಗಿ ಬೆಳೆಸಿದ್ದರೆ ಕುಂಬಾರರು ಇಂದು ರಾತ್ರಿಯಿಡೀ ಗೂಡುಗಳ ಮುಂದೆ ಕುಳಿತು ಬೆಂಕಿ ಮುಂದೆ ಬೆವರಿಳಿಸುವ ಅಗತ್ಯ ಬರುತ್ತಿರಲಿಲ್ಲ. ಈ ನೋವು ಕುಂಬಾರಿಕೆ ನೆಚ್ಚಿಕೊಂಡಿರುವವರನ್ನು ಕಾಡುತ್ತಿರುವುದು ಸುಳ್ಳಲ್ಲ. ಮಣ್ಣಿನ ಜಾರ್​, ಟೀಕಪ್​, ನೀರಿನ ಬಾಟಲ್​, ಹಣತೆ ಮತ್ತು ಅಲಂಕಾರಿಕ ಸಾಮಗ್ರಿಯನ್ನು ಉತ್ತರ ಭಾರತದ ಕಾರ್ಖಾನೆಗಳಿಂದ ತರಿಸಿಕೊಳ್ಳಲಾಗುತ್ತದೆ. ಸ್ಥಳಿಯವಾಗಿ ತಯಾರಿಸುವ ಅರಿವೆಗಳಿಗೆ ಬೇಡಿಕೆಯಿದ್ದು, 60-70 ರೂ. ನಿಂದ 200-300ರೂ ವರೆಗೆ ಮಾರಾಟವಾಗುತ್ತಿವೆ. ಟೀಕಪ್​ ಒಂದಕ್ಕೆ 6 ರೂ. ಇದ್ದರೆ ನೀರಿನ ಬಾಟಲ್​ 50-60 ರೂ.ಗೆ ಮಾರಾಟವಾಗುತ್ತಿದೆ. ಜಗ್​ 150 ರೂ.ಇದೆ. ಅಡುಗೆಗೆ ಮಡಕೆಗಳನ್ನು ಬಳಸುವುದು ಕಡಿಮೆಯಾದ ಮೇಲೆ ಕುಂಬಾರರೂ ಅವುಗಳನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸುತ್ತಿದ್ದು, ಬೇಡಿಕೆ ಇರುವ ಅರಿವೆ ಮತ್ತಿತರ ಒಂದೆರಡು ರೀತಿಯ ಮಡಕೆ ಮಾಡಿ ಪಟ್ಟಣಗಳಿಗೆ ತಂದು ವ್ಯಾಪಾರಸ್ಥರಿಗೆ ಮಾರಿ ಹೋಗುತ್ತಿದ್ದಾರೆ.

ಉತ್ತಮ ಆದಾಯ ನಿರೀಕ್ಷೆ: ಮಡಕೆ ವ್ಯಾಪಾರಸ್ಥರು ಬೇಸಿಗೆಯ 3 ತಿಂಗಳ ವ್ಯಾಪಾರಕ್ಕಾಗಿ ವರ್ಷವಿಡೀ ಕಾಯುತ್ತಿರುತ್ತಾರೆ. ಕೋಲಾರದ ಕುಂಬಾರ ಬೀದಿಯಲ್ಲಿ ವ್ಯಾಪಾರ ನೆಚ್ಚಿಕೊಂಡಿರುವ 20 ಕುಟುಂಬಗಳಿದ್ದು, 100 ರೂ.ನಿಂದ 500-ರೂ.ವರೆಗೆ ಮಡಿಕೆಗಳು ಲಭ್ಯವಿವೆ. ಮಾಲೂರು, ಕೋಲಾರ, ಬಂಗಾರಪೇಟೆ, ಮುಳಬಾಗಿಲು, ಕೆಜಿಎಫ್​ನಲ್ಲೂ ಕುಂಬಾರರ ಬೀದಿಗಳಿದ್ದು, 5-10 ಕುಂಬಾರಿಕೆ ಮನೆತನಗಳಿವೆ. ಕುಲಕಸುಬು ಮುಂದುವರಿಸಿಕೊಂಡು ಬಂದಿರುವ ಈ ಉದ್ಯಮ ಈ ಬಾರಿಯಾದರೂ ಕೈ ಹಿಡಿಯಲಿ ಎಂಬ ನಿರೀಕ್ಷೆಯಲ್ಲಿ ವ್ಯಾಪಾರಸ್ಥರಿದ್ದಾರೆ

ಮಡಕೆಗಳಲ್ಲಿ ಅಡುಗೆ ತಯಾರಿಸುತ್ತಿದ್ದಾಗ ಎಲ್ಲಿಲ್ಲದ ಬೇಡಿಕೆಯಿತ್ತು. ವಿಶೇಷ ದಿನಗಳಲ್ಲಿ ಒಂದೊಂದು ಕುಟುಂಬ ಒಂದೊಂದು ಬಂಡಿಯಲ್ಲಿ ಮಡಕೆಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಆದರೀಗ ದೀಪಾವಳಿಗೆ ಹಣತೆ, ಬೇಸಿಗೆಗೆ ಅರಿವೆ ಮಾರಾಟ. ಯಾರಾದರೂ ಮೃತಪಟ್ಟಾಗ ಮಡಕೆ ಕೊಂಡು ಹೋಗುವುದು ಬಿಟ್ಟರೆ ವ್ಯಾಪಾರವೇ ಇಲ್ಲ. ರತ್ನಮ್ಮ ಮಡಿಕೆ ವ್ಯಾಪಾರಸ್ಥೆ, ಕೋಲಾರ ಕೆರೆಗಳಲ್ಲಿ ನೀರು ತುಂಬಿರುವುದರಿಂದ ಕಪ್ಪು ಜೇಡಿ ಮಣ್ಣು ಸಿಗುತ್ತಿಲ್ಲ. ಮಣ್ಣು ಸಾಗಿಸಲು ಟ್ರಾ$್ಯಕ್ಟರ್​ ಲೋಡ್​ಗೆ 1200ರೂ., ಮಡಕೆ ಸುಡಲು ನೀಲಗಿರಿ ತರಗು ಲೋಡ್​ಗೆ 3500 ರೂ. ಖರ್ಚು ಬರುತ್ತದೆ. ಇದರಿಂದ 100 ಅರಿವೆ ಮಾಡಬಹುದು. ಇನ್ನು ದಿನಕ್ಕೆ 20 ಅರಿವೆಯಂತೆ 5 ದಿನ ಚಕ್ರದ ಮೇಲೆ ಅರಿವೆ ಮಾಡಿ, ಚಕ್ಕೆ ತಟ್ಟಲು ಹಗಲು ರಾತ್ರಿ ಶ್ರಮಿಸಬೇಕಾಗುತ್ತದೆ. 100 ಅರಿವೆ ಮಾರಿದರೆ 6 ರಿಂದ 7 ಸಾವಿರ ರೂ.ಗಳು ಬರುತ್ತದೆ. 5 ರಿಂದ 6 ಸಾವಿರ ಬಂಡವಾಳ ಹಾಕಿ, ನಮ್ಮ ಕೂಲಿಪಾಟು ಸಹ ಸಿಗುವುದು ಕಷ್ಟ. ಸುಬ್ರಮಣಿ ಕುಂಬಾರ, ಹೋಳೂರು ------- ಕುಂಬಾರಿಕೆ ಕಷ್ಟ, ನಷ್ಟದಲ್ಲಿ ನರಳುತ್ತಿದೆ. ಸರ್ಕಾರದಿಂದ ಬಿಡಿಗಾಸಿನ ಸಹಾಯವೂ ಸಿಗುತ್ತಿಲ್ಲ. ಬಂಡವಾಳ ಹಾಕಿ ಕಾರ್ಖಾನೆ ಸ್ಥಾಪಿಸಿದ್ದೆ. ಆದರೆ ನುರಿತ ಕೆಲಸಗಾರರ ಕೊರತೆ, ಸರ್ಕಾರದ ರ್ನಿಲಕ್ಷ$್ಯದಿಂದ ನಷ್ಟ ಹೊಂದಿ ಮುಚ್ಚಬೇಕಾಯಿತು. ಗುಜರಾತ್​ ಮತ್ತಿತರ ರಾಜ್ಯಗಳಲ್ಲಿರುವಂತೆ ಕುಂಬಾರಿಕೆ ತರಬೇತಿ, ಸರ್ಕಾರದಿಂದ ಕೈಗಾರಿಕೆ ಸ್ಥಾಪನೆಗೆ ಸ್ಥಳ ಒದಗಿಸಿ, ಬ್ಯಾಂಕ್​ಗಳಿಂದ ಸಾಲ, ಸಬ್ಸಿಡಿ ನೀಡುವುದರ ಜತೆಗೆ ಯಂತ್ರಗಳನ್ನು ಒದಗಿಸಿದರೆ ಕುಂಬಾರಿಕೆ ಉದ್ಯಮವಾಗಿ ಬೆಳೆಯುತ್ತದೆ. ಕೇಶವ್​ಕುಮಾರ್​ ಪ್ರಜಾಪತಿ ಮಡಕೆ ವ್ಯಾಪಾರಿ, ಕುಂಬಾರಬೀದಿ, ಕೋಲಾರ.