ಮೈಸೂರು: ರಾಜ್ಯ ನಾಯಕರಿಬ್ಬರ ನಡುವೆ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳ ವಾಗ್ಯುದ್ಧ, ಪದಬಳಕೆ, ನಿಂದನೆಗಳು ರಾಜಕಾರಣ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ ಎಂದು ನಗರಪಾಲಿಕೆ ಮಾಜಿ ಸದಸ್ಯ, ಅನಿಕೇತನ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವಿ.ಮಲ್ಲೇಶ್ ತಿಳಿಸಿದ್ದಾರೆ.
ಮೌಲ್ಯಾಧಾರಿತ ಪ್ರಜಾಪ್ರಭುತ್ವದ ರಾಜಕಾರಣಕ್ಕೆ, ಸಭ್ಯ ರಾಜಕಾರಣಕ್ಕೆ ಕರ್ನಾಟಕ ರಾಜ್ಯ ಹೆಸರುವಾಸಿ. ಈ ಮಣ್ಣಿನಲ್ಲಿ ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್, ಎಚ್.ಡಿ. ದೇವೇಗೌಡ, ಎಸ್.ಎಂ.ಕೃಷ್ಣ, ಅಬ್ದುಲ್ ನಜೀರ್‌ಸಾಬ್, ಕೆ.ಎಚ್.ರಂಗನಾಥ್‌ರಂತಹ ದಿಗ್ಗಜರು ರಾಜಕೀಯ ಮಾಡಿದ್ದಾರೆ. ಒಬ್ಬರಿಗೊಬ್ಬರು ಆರೋಪ-ಪ್ರತ್ಯಾರೋಪಗಳನ್ನೂ ಮಾಡಿದ್ದಾರೆ. ಆದರೆ, ಅವರೆಂದಿಗೂ ಸಭ್ಯತೆಯ ಎಲ್ಲೆ ಮೀರಿಲ್ಲ. ಅಂತಹ ನಾಯಕರನ್ನು ನೋಡಿ, ಕೇಳಿ ಬೆಳೆದ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕ ಪ್ರದೀಪ್ ಈಶ್ವರ್ ಅವರ ನಡುವಿನ ಮಾತಿನ ಯುದ್ಧ ಎಲ್ಲೆ ಮೀರಿರುವುದು ನಾಗರಿಕ ಸಮಾಜ ನಾಚುವಂತೆ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಡಿನ ಯುವ ಜನತೆಗೆ ಮಾರ್ಗದರ್ಶಕರಾಗಬೇಕಾದ ಯುವನಾಯಕರಿಬ್ಬರು ತಮ್ಮ ನಾಲಗೆ ಹರಿಬಿಟ್ಟಿರುವ ಪರಿ ಅಸಹ್ಯ ಹುಟ್ಟಿಸುತ್ತಿದೆ. ರಾಜಕೀಯ ನಾಯಕರ ನಡುವೆ ಆರೋಪ-ಪ್ರತ್ಯಾರೋಪ ಸಾಮಾನ್ಯ. ಆದರೆ, ಅದು ತೀರಾ ಕೆಳಮಟ್ಟಕ್ಕೆ ಇಳಿಯಬಾರದು. ರಾಜಕೀಯ ನಾಯಕರಿಬ್ಬರು ಅಭಿವೃದ್ಧಿ ವಿಚಾರವಾಗಿ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕು, ವಿಚಾರ ಮಂಡಿಸಬೇಕು. ಆದರೆ, ಅದೆಲ್ಲವೂ ಪ್ರಸ್ತುತ ಗೌಣವಾಗಿದ್ದು ತೀರ ವೈಯಕ್ತಿಕ ವಿಚಾರಗಳೇ ಚರ್ಚೆಗೆ ಬರುತ್ತಿರುವುದು ಸರಿಯಲ್ಲ. ಇಂದಿನ ಯುವಜನತೆಗೆ ತಮ್ಮಂತಹ ಯುವ ನಾಯಕರು ಮಾದರಿಯಾಗಬೇಕಿತ್ತು. ಆದರೆ, ತಮ್ಮ ನಡವಳಿಕೆ, ವರ್ತನೆ ನೋಡಿದರೆ ನೀವು ಹೇಗೆ ಮಾದರಿಯಾಗುತ್ತೀರಿ ಎಂಬ ಪ್ರಶ್ನೆ ಕಾಡುತ್ತಿದೆ.
ರಾಜಕಾರಣವನ್ನು ಬದಿಗಿಟ್ಟು ನೊಡಿದರೂ ಇಬ್ಬರು ಸಾಮಾನ್ಯ ನಾಗರಿಕರು, ಶಿಕ್ಷಿತರು ಮಾತನಾಡದಷ್ಟು ಕೀಳು ಮಟ್ಟದ ಪದ ಬಳಕೆಯನ್ನು ಮಾಡುತ್ತಿರುವುದು ಅಕ್ಷಮ್ಯ. ಮುಂದಾದರೂ ಬಸವಣ್ಣ, ಕುವೆಂಪು, ಕನಕದಾಸರು ಅವರಂತಹ ಮಹನೀಯರು ಜನ್ಮ ತಾಳಿದ ಈ ಪುಣ್ಯ ನೆಲಕ್ಕೆ ಕಳಂಕ ಬರದಂತೆ ನಡೆದುಕೊಳ್ಳಬೇಕಿದೆ. ವೈಯಕ್ತಿಕ ನಿಂದನೆಗಳನ್ನು ಬಿಟ್ಟು ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸುವ ದಿಕ್ಕಿನಲ್ಲಿ ತಮ್ಮ ಚರ್ಚೆ ಸಾಗಲಿ ಎಂದು ಬಯಸುತ್ತೇನೆ ಎಂದು ತಿಳಿಸಿದ್ದಾರೆ.