ತಿ.ನರಸೀಪುರ: ದಾರ್ಶನಿಕ ಕನಕದಾಸರ ಸಾಮಾಜಿಕ ಅಸಮಾನತೆ ವಿರುದ್ಧದ ಕೀರ್ತನೆಗಳ ಆಶಯಗಳು ಪ್ರಸ್ತುತ ಸಂವಿಧಾನದ ಮೂಲಕ ಸಾಕಾರಗೊಳ್ಳುತ್ತಿವೆ ಎಂದು ಶಾಸಕ ಎಂ.ಅಶ್ವಿನ್ ಕುಮಾರ್ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಭಕ್ತ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾನತೆ, ಒಗ್ಗಟ್ಟಿನ ಮಂತ್ರವನ್ನು ಅಂದು ಜಪಿಸಿದ್ದ ಕನಕದಾಸರು ಕನ್ನಡ ನಾಡಿನ ಆಸ್ತಿಯಾಗಿದ್ದರು. ಅಸಮಾನತೆ ವಿರುದ್ಧ ಕೀರ್ತನೆಗಳ ಮೂಲಕ ಜನಜಾಗೃತಿ ಮೂಡಿಸಿದ್ದರು. ಈ ಆಶಯವನ್ನು ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕುಪ್ಯ ಪುಟ್ಟಸ್ವಾಮಿ ಮಾತನಾಡಿ, ಕನಕದಾಸರ ಜೀವನ ಚರಿತ್ರೆ ಬಹಳ ರೋಚಕವಾಗಿದೆ. ವಿಜಯನಗರ ಅರಸರ ಗೌರವಕ್ಕೆ ಪಾತ್ರರಾಗಿದ್ದರು. ಜತೆಗೆ ಪಾಳೇಗಾರರಾಗಿದ್ದರು. ಉಳುವ ಭೂಮಿಯಲ್ಲಿ ಚಿನ್ನದ ಕೊಪ್ಪರಿಕೆ ಪಡೆದು, ದಾಸರಾಗಿ ಕೃಷ್ಣ ಪರಮಾತ್ಮನನ್ನೇ ತನ್ನತ್ತ ಸೆಳೆದುಕೊಂಡರು. ರಾಮಧಾನ್ಯ ಚರಿತೆಯ ಮೂಲಕ ಬಡವರ ರಾಗಿಯ ಮಹತ್ವವನ್ನು ಜಗತ್ತಿಗೆ ತಿಳಿಸಿದರು. ಕೀರ್ತನೆಗಳ ಮೂಲಕ ಸಮಾಜದ ಅಸಮಾನತೆಯ ವಿರುದ್ಧ ಧ್ವನಿ ಎತ್ತಿ ಸಂತ ಶ್ರೇಷ್ಠರಾದರು ಎಂದು ಹೇಳಿದರು.
ಕರೋಹಟ್ಟಿ ಕೆ.ಎನ್.ಪ್ರಭುಸ್ವಾಮಿ ಮಾತನಾಡಿದರು. ತಹಸೀಲ್ದಾರ್ ಸಿ.ಜಿ.ಗೀತಾ, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ.ಕೃಷ್ಣ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಪುರಸಭೆ ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಟಿ.ಎಂ.ನಂಜುಂಡಸ್ವಾಮಿ, ಎನ್.ಸೋಮಣ್ಣ, ಬಾದಾಮಿ ಮಂಜು, ಸಿದ್ದು, ಕೆ.ನಂಜುಂಡಸ್ವಾಮಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಮಾಜ ಕಲ್ಯಾಧಿಕಾರಿ ರಾಮೇಗೌಡ, ಜಿಪಂ ಎಇಇ ಪಿ. ಲಕ್ಷ್ಮಣ್‌ರಾವ್, ಶಿರಸ್ತೇದಾರ್ ಪ್ರಭುರಾಜ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಉಪನ್ಯಾಸಕ ಕುಮಾರಸ್ವಾಮಿ, ಅಂಬೇಡ್ಕರ್ ಅಭಿವೃದ್ಧಿ ಸಂಘದ ಅಧ್ಯಕ್ಷ ಕರೋಹಟ್ಟಿ ಮಹದೇವಯ್ಯ, ನಾಯಕರ ಸಂಘದ ಅಧ್ಯಕ್ಷ ಚಿಕ್ಕಯ್ಯ, ಕುರುಬರ ಸಂಘದ ಉಪಾಧ್ಯಕ್ಷ ಎಂ.ವೆಂಕಟೇಶ್, ಸಹ ಕಾರ್ಯದರ್ಶಿ ಎನ್.ಎಲ್.ಲಿಂಗಣ್ಣ, ಖಜಾಂಚಿ ಮಲ್ಲೇಶ್, ಸಂತೃಪ್ತಿ ಕುಮಾರ್ ಇನ್ನಿತರರು ಇದ್ದರು.