ನ್ಯೂಸ್

ಕೀರ್ತನೆಗಳ ಮೂಲಕ ಸಮಾನತೆ ಸಾರಿದ ಸಂತ

ನಂಜನಗೂಡಿನಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಶಾಸಕ ಬಿ.ಹರ್ಷವರ್ಧನ್ ಪುಷ್ಪಾರ್ಚನೆ ನೆರವೇರಿಸಿದರು. ಮಹದೇವಸ್ವಾಮಿ, ಮಾರುತಿ, ಕೆಂಪಣ್ಣ ಇದ್ದರು.

ನಂಜನಗೂಡು: ಎಲ್ಲರೂ ಸಮಾನರು ಎಂದು ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿದ ಕನಕದಾಸರ ಚಿಂತನೆಗಳು ನಮಗೆ ಆದರ್ಶವಾಗಬೇಕು ಎಂದು ಶಾಸಕ ಬಿ.ಹರ್ಷವರ್ಧನ್ ಹೇಳಿದರು.


ನಗರದ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಭಕ್ತ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.


ಜಾತಿ, ಮತ ಎಂಬ ತಾರತಮ್ಯ ಇಲ್ಲದೆ ನಾವೆಲ್ಲರೂ ಎಂದೇ ಎಂಬುದನ್ನು ಕೀರ್ತನೆಗಳಲ್ಲಿ ಕನಕದಾಸರು ಸರಳವಾಗಿ ಜಗತ್ತಿಗೆ ಸಾರಿದ್ದಾರೆ. ಕೀರ್ತನೆಗಳಲ್ಲಿ ಅವರು ಎತ್ತುವ ಪ್ರಶ್ನೆಗಳಿಗೆ ಸರ್ವಕಾಲಿಕವಾದವು. ಎಲ್ಲರೂ ಸಹಬಾಳ್ವೆ, ಭಾತೃತ್ವದಿಂದ ಜೀವನ ಸಾಗಿಸಬೇಕೆಂಬುದು ಕನಕದಾಸರ ಆಶಯವಾಗಿತ್ತು. ಒನಕೆ ಓಬವ್ವರ ಧೀರತ್ವ, ದಿಟ್ಟತನ ಇಂದಿನ ಮಕ್ಕಳಿಗೆ ಸ್ಫೂರ್ತಿ ಎಂದು ತಿಳಿಸಿದರು.

ಎಲ್ಲ ಸಮುದಾಯಗಳಿಗೂ ಪ್ರಾತಿನಿಧ್ಯ ನೀಡಬೇಕೆಂಬ ಸಂಸದ ವಿ.ಶ್ರೀನಿವಾಸಪ್ರಸಾದ್ ಆಶಯದಂತೆ ಎಲ್ಲ ವರ್ಗದವರಿಗೂ ಒಂದೇ ಕಡೆ ನಿವೇಶನ ಹಂಚಿಕೆ ಮಾಡಿ ಸಮುದಾಯ ಭವನ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡಿದ್ದೇನೆ. ಎಲ್ಲ ಮಹಾಪುರುಷರ ಹೆಸರಿನಲ್ಲಿ ಸಮುದಾಯ ಭವನಗಳಿಗೆ ನಾಮಕರಣ ಮಾಡುವುದಾಗಿ ತಿಳಿಸಿದರು.


ಈ ಬಾರಿ ಕನಕ ಜಯಂತಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲು ತಾಲೂಕು ಆಡಳಿತ ಸನ್ನದ್ಧವಾಗಿತ್ತು. ಆದರೆ ಸಂಘಟನೆಯವರು ನ. 30ರಂದು ಅದ್ದೂರಿಯಾಗಿ ಆಚರಣೆ ಮಾಡಲು ಅವಕಾಶ ನೀಡುವಂತೆ ಕೋರಿದ್ದಾರೆ ಎಂದರು.


ನಗರಸಭಾಧ್ಯಕ್ಷ ಎಚ್.ಎಸ್.ಮಹದೇವಸ್ವಾಮಿ, ತಹಸೀಲ್ದಾರ್ ಎಂ.ಶಿವಮೂರ್ತಿ, ತಾಪಂ ಇಒ ಶ್ರೀನಿವಾಸ್, ತಾಲೂಕು ಕುರುಬರ ಸಂಘದ ಅಧ್ಯಕ್ಷ ಕೆಂಪಣ್ಣ, ಜಿಪಂ ಮಾಜಿ ಸದಸ್ಯ ಕೆ.ಮಾರುತಿ, ನೀಲಿಸಿದ್ದು, ರಂಗಸ್ವಾಮಿ ಇತರರು ಇದ್ದರು.