‘ಈಗಿನ ಧಾರಾವಾಹಿಗಳು ಯಾರದೋ ಕಥೆಯಾಗಿರುತ್ತದೆ. ಬೇರೆ ಯಾರೋ ಕಥೆಯನ್ನು ನಿರ್ಧಾರ ಮಾಡುತ್ತಾರೆ. ಇನ್ಯಾವುದೋ ಭಾಷೆಯಲ್ಲಿ ನಿರ್ಮಾಣವಾಗಿರುವ ಧಾರಾವಾಹಿಗಳನ್ನು ನಮ್ಮ ಭಾಷೆಗೆ ತಂದು ತುರುಕುತ್ತಾರೆ. ಒಟ್ಟಾರೆ ಇತ್ತೀಚೆಗೆ ಕಿರುತೆರೆಯ ಧಾರಾವಾಹಿಗಳ ನಿರ್ಮಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರೃಕ್ಕೆ ಅವಕಾಶವೇ ಇಲ್ಲವಾಗಿದೆ’
-ಇದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೇಳಿಕೆ.
ನಗರದ ಖಾಸಗಿ ಹೋಟೆಲ್‌ನ ಅವರಣದಲ್ಲಿ ಮೈಸೂರು ಲಿಟರರಿ ಫೋರಂ ವತಿಯಿಂದ ಎರಡು ದಿನ ಆಯೋಜಿಸಿರುವ ‘ಮೈಸೂರು ಸಾಹಿತ್ಯ ಸಂಭ್ರಮ-2025’ ಕಾರ್ಯಕ್ರಮದಲ್ಲಿ ಭಾನುವಾರ ‘ಸಾಹಿತ್ಯ-ಸಿನಿಮಾ-ಹಳ್ಳಿಯ ಹಂಬಲದ ತೆಕ್ಕೆಯಲ್ಲಿ’ ಕುರಿತ ಗೋಷ್ಠಿಯಲ್ಲಿ ಮಾತನಾಡಿದರು.
ಧಾರಾವಾಹಿ ಎನ್ನುವುದು ಮನರಂಜನೆ ಮಾರ್ಗವಾಗಿದೆ. ಈಗಂತೂ ಧಾರವಾಹಿ ನೋಡದೆ ಹೋದರೆ ಕೆಲವರಿಗೆ ಹುಚ್ಚು ಹಿಡಿದೇ ಹೋಗುತ್ತದೆ. ಅಷ್ಟರ ಮಟ್ಟಗೆ ಪ್ರಭಾವವನ್ನು ಬೀರಿದೆ. ಜತೆಗೆ ದೊಡ್ಡ ಉದ್ಯಮವಾಗಿ ಬೆಳೆದು ಬಿಟ್ಟಿದೆ. ನಮ್ಮ ಕಾಲದಲ್ಲಿ ನಾವು ಧಾರಾವಾಹಿಯನ್ನು ನಿರ್ಮಾಣ ಮಾಡುವಾಗ ಸದಭಿರುಚಿಯಿಂದ ಕೂಡಿತ್ತು. ಎಲ್ಲರೂ ಒಂದು ಕುಟುಂಬದ ರೀತಿಯಲ್ಲಿ ಇರುತ್ತಿದ್ದೆವು. ಈಗಾಗಿಯೇ ವಠಾರ ಧಾರಾವಾಹಿ ಸಾವಿರಕ್ಕೂ ಹೆಚ್ಚು ಸಂಚಿಕೆಯಲ್ಲಿ ಪ್ರಸಾರವಾಯಿತು ಎಂದರು.
ಕಾರ್ಪೊರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕಾದ ಪರಿಸ್ಥಿತಿ ಇದೆ. ಇಲ್ಲಿ ನಿರ್ದೇಶಕನಿಗೆ, ಕಲಾವಿದರಿಗೆ, ತಂತ್ರಜ್ಞರಿಗೆ, ಕಥೆ-ಸಂಭಾಷಣೆಗಾರರಿಕೆ ಅಭಿವ್ಯಕ್ತಿ ಸ್ವಾತಂತ್ರೃ ಎನ್ನುವುದು ಇಲ್ಲ ಎಂದು ವಿಶ್ಲೇಷಣೆ ಮಾಡಿದರು.