ಚಿತ್ರದುರ್ಗ: ಉತ್ತರ ಪ್ರದೇಶದಿಂದ ತರಿಸಿರುವ ಅಯೋಧ್ಯೆಯ ಶ್ರೀರಾಮಮಂದಿರವನ್ನೇ ಹೋಲುವ ಮಾದರಿ ಕಿರು ಮಂದಿರವೂ ಅತ್ಯಂತ ಆಕರ್ಷಣೀಯವಾಗಿದ್ದು, ವಿದ್ಯುದ್ದೀಪಾಲಂಕಾರವೂ ಕಣ್ಮನ ಸೆಳೆಯುತ್ತಿದೆ.
ಯುಪಿಯ ನುರಿತ ಶಿಲ್ಪಿಗಳು ಮೃದುವಾದ ಮರ ಬಳಸಿ ಇದನ್ನು ತಯಾರಿಸಿದ್ದಾರೆ. 25 ಸಾವಿರ ರೂ. ವೆಚ್ಚದ ಈ ಮಾದರಿ ಮಂದಿರವನ್ನು ಅಲ್ಲಿಂದ ಆಮದು ಮಾಡಿಕೊಳ್ಳಲು ಅಂದಾಜು 10 ಸಾವಿರ ರೂ. ಆಗಲಿದೆ. ಹೀಗಾಗಿ ಒಂದನ್ನು ಖರೀದಿಸಲು 35 ಸಾವಿರ ರೂ. ಖರ್ಚಾಗಲಿದೆ.
ವಿದ್ಯುತ್ ಇರುವ, ಇರದ ಮಾದರಿಗಳು ಕೂಡ ತಯಾರಕರ ಬಳಿ ಲಭ್ಯವಿವೆ. ಇಂಚಿನಿಂದ ಅಡಿ ಲೆಕ್ಕದವರೆಗೂ 650 ರೂ.ನಿಂದ, 35 ಸಾವಿರಕ್ಕೂ ಅಧಿಕ ಬೆಲೆಯ ಮಂದಿರಗಳು ಈಗಾಗಲೇ ಮಾರಾಟವಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 850, 1,850 ರೂ. ನ ಅತ್ಯಂತ ಚಿಕ್ಕದಾದ ಮಾದರಿ ಮಂದಿರಗಳು ಬೇಡಿಕೆ ಅನುಸಾರ ಮಾರಾಟವಾಗಿವೆ.
35 ಸಾವಿರ ರೂ. ಮಾದರಿಯ ಈ ಮಂದಿರವನ್ನು ಇಲ್ಲಿನ ರಾಜಸ್ಥಾನ ಸಂಘ ಹಾಗೂ ಎಸ್‌ಆರ್‌ಎಸ್ ಶಿಕ್ಷಣ ಸಂಸ್ಥೆ ಪಡೆದಿವೆ ಎನ್ನುತ್ತಾರೆ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬದ್ರಿನಾಥ್.
ಕೇದಾರನಾಥೇಶ್ವರ, ಬದರಿನಾಥ, ಸೋಮನಾಥೇಶ್ವರ, ಕಾಶಿ ವಿಶ್ವೇಶ್ವರ, ಶ್ರೀಶೈಲ ಮಲ್ಲಿಕಾರ್ಜುನ, ವೈದ್ಯನಾಥೇಶ್ವರ, ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ, ದ್ವಾರಕನಾಥ, ಅಯೋಧ್ಯೆಯ ಶ್ರೀರಾಮಮಂದಿರ ಸೇರಿ ಹಲವು ಪುಣ್ಯ ಕ್ಷೇತ್ರಗಳ ಮಾದರಿಗಳನ್ನು ಸಂಗ್ರಹಿಸುವ ಹವ್ಯಾಸ ಮೊದಲಿನಿಂದಲೂ ಬೆಳೆಸಿಕೊಂಡಿದ್ದೇನೆ. ನಮ್ಮ ಮನೆಯಲ್ಲಿರುವ ಮಾದರಿಗಳ ಸುಂದರ ಕೆತ್ತನೆ ನೋಡಿದವರು ತರಿಸಿಕೊಡುವಂತೆ ಕೇಳಿಕೊಳ್ಳುತ್ತಾರೆ. ಯಾವುದು ಇಷ್ಟವಾಗುತ್ತದೋ ಆ ಮಾದರಿ ತರಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.