ನ್ಯೂಸ್

ಕಿರು ಆಹಾರ ಸಂಸ್ಕರಣಾ ಉದ್ದಿಮೆದಾರರ ಆರ್ಥಿಕ ನೆರವಿಗೆ ತಾಕೀತು

ಚಿತ್ರದುರ್ಗ: ಜಿಲ್ಲೆಯ ಹಲವು ಸ್ವ-ಸಹಾಯ ಗುಂಪುಗಳು ಹಾಗೂ ಆಸಕ್ತರು ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಸ್ಥಾಪಿಸಲು ಉತ್ಸಕರಾಗಿ ದ್ದಾರೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ ಹೇಳಿದರು.
ಡಿಸಿ ಕಚೇರಿಯಲ್ಲಿ ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆ(ಪಿಎಂಎಫ್‌ಎಂಇ)ಹಾಗೂ ಕೃಷಿ ಮೂಲ ಸೌಕರ್ಯ ನಿಧಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸ್ವ-ಸಹಾಯ ಗುಂಪುಗಳು ಹಾಗೂ ಆಸಕ್ತ ಉದ್ದಿಮೆದಾರರಿಗೆ ರಾಷ್ಟ್ರೀಯ ಬ್ಯಾಂಕ್ ಹಣಕಾಸು ನೆರವು ನೀಡಬೇಕು.
ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಲು ಹಾಗೂ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಸಂಘಟಿತ ಉದ್ದಿಮೆಗಳನ್ನು ವಿಸ್ತರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಜಿಲ್ಲೆಯಲ್ಲಿ 380 ಘಟಕಗಳಿಗೆ ಆರ್ಥಿಕ ನೆರವಿನ ಗುರಿ ಇದೆ. 397 ಅರ್ಜಿಗಳು ಸಲ್ಲಿಕೆಯಾ ಗಿದ್ದು,205 ಅರ್ಜಿಗಳ ಯೋಜನಾ ವರದಿ ಸಿದ್ಧವಾಗಿವೆ.
192 ಅರ್ಜಿಗಳು ಸಹಾಯಧನಕ್ಕೆ ಸ್ವೀಕೃತವಾಗಿವೆ. 2020-21 ಸಾಲಿನಿಂದ 2023-24 ಸಾಲಿನವರಿಗೆ 60 ಅರ್ಜಿಗಳಿಗೆ ಮಂಜೂರಾತಿ ನೀಡಲಾಗಿದೆ. 59 ಅರ್ಜಿಗಳು ತಿರಸ್ಕೃತಗೊಂಡಿವೆ. 41 ಅರ್ಜಿಗಳನ್ನು ಮಂಜೂರು ಮಾಡುವ ಕಾರ್ಯಪ್ರಗತಿಯಲ್ಲಿವೆ. ಎಲ್ಲ ರಾಷ್ಟ್ರೀ ಕೃತ ಬ್ಯಾಂಕ್‌ಗಳು ಅರ್ಜಿಗಳನ್ನು ಪರಿಶೀಲಿಸಿ ಹಣಕಾಸು ಮಂಜೂರಾತಿ ನೀಡಬೇಕೆಂದರು.
ಈ ಯೋಜನೆಯಡಿ 18 ವರ್ಷ ಮೀರಿದ ಯಾವುದೇ ವ್ಯಕ್ತಿ,ಉದ್ದಿಮೆ ಮಾಲಿಕತ್ವ ಅಥವಾ ಪಾಲುದಾರಿಕೆ ಹೊಂದಿದಲ್ಲಿ ಅರ್ಜಿ ಸಲ್ಲಿಸ ಬಹುದೆಂದರು. ಸಾಲದ ಮೊತ್ತ ಸಬ್ಸಿಡಿ ವಿವರ,ಬಂಡವಾಳ,ಸಣ್ಣ ಉಪಕರಣಗಳ ಖರೀದಿಗೆ ಅಗತ್ಯ ಆರ್ಥಿಕ ನೆರವಿನ ವಿವರ ನೀಡಿದರು. ಹೋಟೆಲ್,ರೆಸ್ಟೋರೆಂಟ್‌ಗಳ ಸ್ಥಾಪನೆಗೆ ಸಹಾಯಧನ ನೀಡಲಾಗದೆಂದ ಮಂಜುನಾಥ ಹೇಳಿದರು.
ಕೃಷಿ ಉಪನಿರ್ದೇಶಕ ಪ್ರಭಾಕರ್ ಮಾತನಾಡಿ,ಕಿರು ಆಹಾರ ಸಂಸ್ಕರಣ ಉದ್ದಿಮೆಗಳು ಗ್ರಾಮೀಣ ಭಾಗದಲ್ಲಿಯೇ ಹೆಚ್ಚಾಗಿ ಕಾರ್ಯ ನಿರ್ವಹಿಸುತ್ತಿವೆ. ಬ್ಯಾಂಕ್‌ಗಳು ಪಟ್ಟಣ ಹಾಗೂ ನಗರಗಳಲ್ಲಿ ಉದ್ದಿಮೆ ಸ್ಥಾಪಿಸುವಂತೆ ಅರ್ಜಿದಾರರ ಮೇಲೆ ಒತ್ತಡ ತರಬಾರದೆಂದರು. ಕೃಷಿ ಆಧಾರಿತ ಉತ್ಪನ್ನಗಳನ್ನು ಒಕ್ಕೂಟದ ಅಡಿ ತಂದು ಕೆಎಂಎಫ್ ಮಾದರಿ ಅಭಿವೃದ್ಧಿಗೆ ಚಿಂತನೆ ನಡೆದಿದೆ ಎಂದರು.
ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ಕವಿತಾಶಶಿಧರ ಮಾತನಾಡಿದರು. ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಬಿ.ಆನಂದ, ಲೀಡ್‌ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ತಿಪ್ಪೇಶ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್, ಪಶು ಸಂಗೋಪನ ಇಲಾಖೆ ಉಪನಿರ್ದೇಶಕ ಡಾ.ಬಾಬುರತ್ನ ಮತ್ತಿತರರು ಇದ್ದರು.