ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಗುಡ್ಡ ಕುಸಿತವಾದ ಸ್ಥಳಕ್ಕೆ ಮರಳು ಮೂಟೆ ಜೋಡಿಸಿರುವುದು.  
ನ್ಯೂಸ್

ಕಿರಿದಾದ ರಸ್ತೆಯಲ್ಲಿ ಸಂಚರಿಸುವುದೇ ಹರಸಾಹಸ

ಮೂಡಿಗೆರೆ: ಚಾರ್ಮಾಡಿ ಘಾಟ್ ರಸ್ತೆ ಕಿರಿದಾಗಿದ್ದು ಗುಡ್ಡ ಕುಸಿತದಿಂದ ವಾಹನ ಸಂಚಾರಕ್ಕೆ ಆಗಾಗ ಅಡ್ಡಿಯಾಗುತ್ತಿದೆ. ಹೆದ್ದಾರಿಯ ಅಲ್ಲಲ್ಲಿ ಗುಂಡಿಯಾಗಿರುವುದರಿಂದ ಪ್ರಯಾಣಿಕರು ಜೀವಭಯದಲ್ಲಿ ಸಂಚರಿಸುವಂತಾಗಿದೆ.

ಕೊಟ್ಟಿಗೆಹಾರದಿಂದ ದಕ್ಷಿಣಕನ್ನಡ ಜಿಲ್ಲೆಯ ಚಾರ್ಮಾಡಿ ಗ್ರಾಮದವರೆಗೆ 26 ಕಿ.ಮೀ. ದುರ್ಗಮ ಅರಣ್ಯದ ಮಧ್ಯೆ ಕಡಿದಾದ ತಿರುವಿನಿಂದ ಕೂಡಿದ, 11 ಹಿಮ್ಮುರಿ ತಿರುವನ್ನು ಹೊಂದಿರುವ ತುಮಕೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಘಾಟ್ ರಸ್ತೆಯಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ಎದುರಿನಿಂದ ಬರುವ ವಾಹನಗಳು ಕಾಣದಷ್ಟು ಸಂಖ್ಯೆಯ ತಿರುವನ್ನು ಈ ರಸ್ತೆ ಹೊಂದಿದೆ. ಹೆದ್ದಾರಿ ತೀರ ಕಿರಿದಾಗಿರುವುದರಿಂದ ಎದುರಿನಿಂದ ಬರುವ ಟ್ರಕ್‌ಗಳಿಗೆ ದಾರಿ ಬಿಡುವುದೇ ಚಾಲಕರಿಗೆ ಹರಸಾಹಸ ಎಂಬಂತಾಗಿದೆ. ಪ್ರವಾಸಿಗರ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸುವ ಕಾರಣ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಇನ್ನಷ್ಟು ಕಠಿಣ ಪರಿಸ್ಥಿತಿಯುಂಟಾಗಿದೆ. ಪ್ರವಾಸಿಗರು ಕೇಕೆ ಹಾಕಿ ಕುಣಿದಾಡುತ್ತ ಸೆಲ್ಫಿ ತೆಗೆಯಲು ಮುಗಿಬಿದ್ದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ವಾರಾಂತ್ಯದಲ್ಲಿ ಘಾಟ್ ರಸ್ತೆಯಲ್ಲಿ ಸಾಗುವ ವಾಹನಗಳ ಸಂಖ್ಯೆ ದುಪ್ಪಟ್ಟಾಗಿರುತ್ತದೆ. ಟ್ರಾಫಿಕ್ ಜಾಮ್ ನಿರಂತರವಾಗಿ ಮುಂದುವರಿದಿದೆ.

ಒಮ್ಮೆ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರೆ ಸಂಚಾರ ಸುಗಮವಾಗಲು ಒಂದೆರಡು ಗಂಟೆ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತು ಕಾಯಲೇಬೇಕು. ಚಿಕ್ಕ ಮಕ್ಕಳು, ಹಿರಿಯ ನಾಗರಿಕರು, ಅನಾರೋಗ್ಯಪೀಡಿತರು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡರೆ ಪರಿಸ್ಥಿತಿ ಹೇಳತೀರದು.

ಹಿಂದೆ ಮಳೆಗಾಲದಲ್ಲಿ ಮಾತ್ರ ಘಾಟ್ ಹೆದ್ದಾರಿಯಲ್ಲಿ ಗುಡ್ಡ ಜರಿಯುತ್ತಿತ್ತು. ಮೇಲಿನಿಂದ ಮಣ್ಣು ಮತ್ತು ಕಲ್ಲುಗಳು ರಸ್ತೆಗೆ ಬಿದ್ದಾಗ ಅದನ್ನು ತೆರವುಗೊಳಿಸಲು ಜೆಸಿಬಿ ಬಳಸುತ್ತಿರುವ ಕಾರಣ ಈಗ ಬೇಸಿಗೆಯಲ್ಲೂ ಗುಡ್ಡ ಕುಸಿಯುವುದು ಮಾಮೂಲಿಯಾಗಿದೆ. ಗುಡ್ಡ ಕುಸಿದ ಭಾಗವನ್ನು ದುರಸ್ತಿ ಮಾಡಲು ಹೆದ್ದಾರಿ ಪ್ರಾಧಿಕಾರ ಮುಂದಾಗುತ್ತಿಲ್ಲ. ಗುಡ್ಡ ಕುಸಿದ ಸ್ಥಳಕ್ಕೆ ಮರಳು ಮೂಟೆ ಇಟ್ಟು ಮತ್ತೆ ಗುಡ್ಡ ಕುಸಿಯದಂತೆ ತಡೆಯೊಡ್ಡಲಾಗಿದೆ. ಮರಳು ಮೂಟೆ ಅಡ್ಡವಿಟ್ಟ ಮಾತ್ರಕ್ಕೆ ಗುಡ್ಡ ಕುಸಿತ ನಿಲ್ಲುವುದಿಲ್ಲ. ಗುಡ್ಡ ಕುಸಿಯದಂತೆ ಆಧುನಿಕ ತಂತ್ರಜ್ಞಾನ ಬಳಸಿ ಪ್ಲಾಸ್ಟರ್ ಮಾಡಬೇಕಾಗಿದೆ.