ಸಾಗರ: ನಗರದ ಪ್ರಮುಖ ರಸ್ತೆಗಳು ಕಿರಿದಾಗಿರುವುದು ಟ್ರಾಫಿಕ್ ಸಮಸ್ಯೆ ಹೆಚ್ಚಲು ಮೊದಲ ಕಾರಣ. ಫುಟ್‌ಪಾತ್ ವ್ಯಾಪಾರ ಟ್ರಾಫಿಕ್ ಸಮಸ್ಯೆ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. 70 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಸಾಗರ ನಗರ ಪ್ರದೇಶದಲ್ಲಿ ದಿನೇದಿನೆ ಸಮಸ್ಯೆ ಹೆಚ್ಚುತ್ತಲೇ ಇದೆ.
ಸಾಗರದಲ್ಲಿ ಬಿ.ಎಚ್.ರಸ್ತೆ ಒಳಗೊಂಡಂತೆ ಜೆ.ಸಿ. ರಸ್ತೆ, ತಿಲಕ್ ರಸ್ತೆ, ಸೊರಬ ರಸ್ತೆ, ಅಶೋಕ ರಸ್ತೆಗಳಲ್ಲಿ ವಾಹನಗಳ ಓಡಾಟ ದಟ್ಟವಾಗಿದೆ. ಪ್ರಮುಖ ರಸ್ತೆಗಳಲ್ಲಿ ವಾಹನಗಳನ್ನು ನಿಲ್ಲಿಸಲು ನಿಯಮಗಳನ್ನು ಜಾರಿಗೊಳಿಸಿದ್ದರೂ ಸವಾರರು, ಚಾಲಕರು ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವ ದುರಭ್ಯಾಸ ಬಿಟ್ಟಿಲ್ಲ. ಇನ್ನು ಕೆಲವರು ಅಂಗಡಿ ಮುಂಗಟ್ಟುಗಳ ನಾಮಫಲಕ, ಮಾರಾಟದ ಸಾಮಗ್ರಿಗಳನ್ನು ಫುಟ್‌ಪಾತ್ ಮೀರಿ ಮುಂದೆ ಚಾಚಿಬಿಟ್ಟಿದ್ದಾರೆ. ಇವುಗಳನ್ನು ತೆರವು ಮಾಡಿ, ದೂರು ದಾಖಲಿಸಿ ದಂಡ ವಸೂಲಿ ಮಾಡುವ ಪ್ರಯತ್ನವೂ ನಡೆಯುತ್ತಿದೆ.
ಫುಟ್‌ಪಾತ್ ಇರುವುದೇ ಪಾದಚಾರಿಗಳಿಗೆ ಓಡಾಡುವುದಕ್ಕೆ. ಆದರೆ ಸಾಗರದ ಬಹುತೇಕ ಫುಟ್‌ಪಾತ್‌ಗಳಲ್ಲಿ ತರಕಾರಿ, ಹಣ್ಣುಗಳ ಮಾರಾಟ, ಗೂಡಂಗಡಿಗಳು ಎಲ್ಲೆಂದರಲ್ಲಿ ರಸ್ತೆಗೆ ಚಾಚಿ ನಿಲ್ಲುತ್ತಿವೆ. ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ನಿರ್ಮಿಸಿರುವ ಫುಟ್‌ಪಾತ್‌ಗಳು ವ್ಯವಸ್ಥಿತವಾಗಿಲ್ಲ. ಮಳೆ ಬಂತೆಂದರೆ ಜನ ಹಿಡಿ ಶಾಪ ಹಾಕುತ್ತಾರೆ.
ಫುಟ್‌ಪಾತ್‌ಗಳೇ ಭಯಾನಕವಾಗಿದ್ದು, ಕಾಮಗಾರಿಗಳು ಆಮೆಗತಿಯಲ್ಲಿ ಸಾಗಿವೆ. ಕಲ್ಯಾಣ ಮಂಟಪ, ಖಾಸಗಿ ಆಸ್ಪತ್ರೆಗಳು ವಾಹನ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡದಿರುವುದು ತಲೆನೋವಾಗಿದೆ. ಸಾಗರ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆಯೂ ಇಲ್ಲ. ಕಾನೂನು ಪಾಲಿಸುವುದು ಸಹ ವ್ಯವಸ್ಥಿತವಾಗಿ ನಡೆಯುತ್ತಿಲ್ಲ.
ಸಾಗರ ನಗರದಲ್ಲಿ ದಿನೇದಿನೆ ದ್ವಿಚಕ್ರ ಮತ್ತು ಇತರ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಾಗರ ನಗರದಲ್ಲಿ ವಾಹನಗಳ ಪಾರ್ಕಿಂಗ್ ತಲೆನೋವಾಗಿ ಪರಿಣಮಿಸಿದೆ. ನಗರಸಭೆ ಮತ್ತು ಪೊಲೀಸ್ ಇಲಾಖೆ ಒಂದಷ್ಟು ಗಟ್ಟಿ ಪ್ರಯತ್ನ ಮಾಡುತ್ತಿದ್ದರೂ ನಿರೀಕ್ಷಿಸಿದಷ್ಟು ಯಶಸ್ಸು ಸಿಕ್ಕಿಲ್ಲ. ನಗರಸಭೆ ಆಡಳಿತ ಇನ್ನಷ್ಟು ಬಿಗಿಗೊಳಿಸಬೇಕು ಎನ್ನುವುದು ಜನತೆ ಆಶಯ.
ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಕೇಸ್: ಸಾಗರದಲ್ಲಿ ಬಿ.ಎಚ್ ರಸ್ತೆ ಒಳಗೊಂಡಂತೆ ಪ್ರಮುಖ ರಸ್ತೆಗಳಲ್ಲಿ ಒಂದು ದಿನಕ್ಕೆ 25 ಸಾವಿರಕ್ಕೂ ಹೆಚ್ಚು ವಾಹನಗಳು ಓಡಾಡುತ್ತವೆ. ಇನ್ನು ಸಾಗರ ನಗರದ ಪ್ರಮುಖ ವೃತ್ತಗಳಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡಿದವರ ಮೇಲೆ ನಿರಂತರ ಕೇಸ್ ದಾಖಲಿಸಲಾಗುತ್ತಿದೆ. ಇದಕ್ಕಾಗಿ ಪ್ರತ್ಯೇಕ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಒಂದೂವರೆ ತಿಂಗಳಿನಲ್ಲಿ ನಿಯಮ ಪಾಲಿಸದಿರುವ 600 ಪ್ರಕರಣಗಳು ಕಂಡು ಬಂದಿವೆ. ಪದೇಪದೆ ತಪ್ಪು ಮಾಡುವವರ ವಿರುದ್ಧ ದೂರು ದಾಖಲಾಗಿದೆ. ಇನ್ನು ಪಾದಚಾರಿಗಳು ಓಡಾಡುವ ಜಾಗದವರೆಗೆ ಅಂಗಡಿ ಮುಂಗಟ್ಟುಗಳನ್ನು ಚಾಚಿಕೊಂಡ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಾಗರ ನಗರದ ಬಿ.ಎಚ್ ರಸ್ತೆ ಅಗಲೀಕರಣ ಕಾಮಗಾರಿ ಆರಂಭಗೊಂಡಿದೆ. ಮಾರ್ಕೆಟ್ ರಸ್ತೆ ವಿಸ್ತರಣೆ ಶೀಘ್ರ ಆರಂಭವಾಗಲಿದೆ. ಸಾಗರ ನಗರದ ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಫುಡ್‌ಕೋರ್ಟ್ ನಿರ್ಮಿಸಲು ಆಲೋಚಿಸಲಾಗಿದೆ. ತಾತ್ಕಾಲಿಕವಾಗಿ ಬೀದಿ ವ್ಯಾಪಾರಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ನಗರ ವ್ಯಾಪ್ತಿಯಲ್ಲಿ ಕಾಮಗಾರಿಗೆ ಅವಶ್ಯವಿರುವ ಪ್ರದೇಶಗಳಲ್ಲಿ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳುತ್ತಾರೆ ಸಾಗರ ಎಸಿ ಆರ್.ಯತೀಶ್.