ಮೆಣಸೆ ಗ್ರಾಪಂ ಕಿರಕೋಡು-ಪಡುಬೈಲು ರಸ್ತೆ ಹದಗೆಟ್ಟಿರುವುದು. 
ನ್ಯೂಸ್

ಕಿರಕೋಡು-ಪಡುಬೈಲು ರಸ್ತೆ ಸಂಚಾರ ದುಸ್ತರ

ಶೃಂಗೇರಿ: ಮೆಣಸೆ ಗ್ರಾಮ ಪಂಚಾಯಿತಿ ಮಾದಲುಕೊಡಿಗೆ ಗಣಪತಿ ದೇವಸ್ಥಾನದಿಂದ ಕಿರಕೋಡಿಗೆ ಹೋಗಿ ಪಡುಬೈಲಿಗೆ ಸೇರುವ ರಸ್ತೆ ಸಂಚಾರ ದುಸ್ತರವಾಗಿದ್ದು ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ.

ಈ ಭಾಗದಲ್ಲಿ ಸಂಚರಿಸುವಾಗ ದ್ವಿಚಕ್ರ ವಾಹನ ಸವಾರರು ಸಹ ಸವಾರರನ್ನು ಇಳಿಸಿ ಹಾಳಾದ ರಸ್ತೆ ಮುಗಿದ ನಂತರ ಹತ್ತಿಸಿಕೊಂಡು ಹೋಗವಂಥ ಪರಿಸ್ಥಿತಿ ಇದೆ. ವಾಹನಗಳು ಸಂಚರಿಸುವಾಗ ಹೊಂಡ ಗುಂಡಿ ದಾಟಿ ಹೋಗಬೇಕಾಗಿದೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರು ತುಂಬಿ ವಾಹನ ಸಂಚಾರ ಅಪಾಯಕಾರಿಯಾಗಿದೆ.

ಈ ಭಾಗದ ರಸ್ತೆಯಲ್ಲಿ ಎರಡು ದೇವಸ್ಥಾನಗಳಿದ್ದು ಕೊಟ್ಟೋಡಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಹಾಗೂ ಮಾದಲಕೊಡಿಗೆ ಗಣಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ನೂರಾರು ಭಕ್ತಾದಿಗಳು ಬರುತ್ತಾರೆ. ರೈತರು ಜಮೀನುಗಳಿಗೆ ಹೋಗಬೇಕಾದರೆ ಈ ರಸ್ತೆಯಲ್ಲಿಯೇ ಸಾಗಬೇಕಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಸಮರ್ಪಕವಾಗಿ ಚರಂಡಿ ಇಲ್ಲದ ಪರಿಣಾಮ ನೀರು ರಸ್ತೆ ಮೇಲೆಯೆ ಹರಿದು ರಸ್ತೆಯ ದುಸ್ಥಿತಿ ಹೇಳತೀರದ್ದಾಗಿದೆ. ಇದು ಹತ್ತಾರು ಮನೆಗಳಿಗೆ ಹೋಗುವ ರಸ್ತೆಯಾಗಿದ್ದು ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು, ವಾಹನ ಸವಾರರು, ನಿತ್ಯ ಸಂಕಟ ಅನುಭವಿಸುತ್ತಿದ್ದಾರೆ.

ವಿಶೇಷವೆಂದರೆ ರಸ್ತೆ ಪಕ್ಕದಲ್ಲಿ ಗ್ರಾಮ ಸಡಕ್ ಯೋಜನೆಯಂತಹ ದೊಡ್ಡ ಬೋರ್ಡ್ ಹಾಕಿದ್ದಾರೆ. ಆದರೆ ರಸ್ತೆ ಅಭಿವೃದ್ಧಿ ಮಾತ್ರ ಕಂಡಿಲ್ಲ. ಯಾವಾಗ ದುರಸ್ತಿ ಕಾಮಗಾರಿ ಆರಂಭಿಸುತ್ತಾರೆ ಎಂದು ಚಾತಕಪಕ್ಷಿಯಂತೆ ಗ್ರಾಮಸ್ಥರು ಕಾಯುತ್ತಿದ್ದರೂ ರಸ್ತೆ ಅಭಿವೃದ್ಧಿಗೆ ಮಾತ್ರ ಕಾಲಕೂಡಿಬಂದಿಲ್ಲ.