ಬೀರೂರು: ಬಸವಣ್ಣ ಅತ್ಯುತ್ತಮ ಸಮಾಜ ಸೇವಕ. ಅವರು ಸಮಾಜದ ಕೆಲವು ಅನಿಷ್ಟ ಪದ್ಧತಿಗಳ ವಿರುದ್ಧ ಹೋರಾಡಿದವರು. ಆಳವಾದ ಸಾಮಾಜಿಕ ಜ್ಞಾನ ಮತ್ತು ಕಾವ್ಯದ ಮೂಲಕ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸಿದರು ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.
ಪುರಸಭೆಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣ ಸಮಾಜದಲ್ಲಿದ್ದ ಅಸಮಾನತೆ, ಜಾತಿ, ವರ್ಣಭೇದ ದಂಥ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ ಯತ್ನಿಸಿದ್ದವರು. ಅವರು ಸರ್ವಕಾಲಕ್ಕೂ ಚಿರಸ್ಮರಣೀಯರಾಗಿದ್ದಾರೆ. ಅವರ ತತ್ವ, ಸಿದ್ಧಾಂತಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಮಹಾತ್ಮರ ಜಯಂತಿಯನ್ನು ಜಾತ್ಯತೀತವಾಗಿ ಆಚರಿಸಿದಾಗ ಮಾತ್ರ ಅವರಿಗೆ ಗೌರವ ನೀಡಿದಂತೆ. ಅವರು ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದರು.
ಪುರಸಭೆ ಸದಸ್ಯ ಬಿ.ಆರ್.ಮೋಹನ್‌ಕುಮಾರ್ ಮಾತನಾಡಿ, ಮುಂದಿನ ಸಮಾಜದ ಪರಿಕಲ್ಪನೆಯನ್ನು ಮನಗಂಡ ಬಸವಣ್ಣ ಅನೇಕ ವಚನಗಳನ್ನು ರಚಿಸಿ ಎಲ್ಲರಿಗೂ ಮನದಟ್ಟು ಮಾಡಿದ್ದರು. 12ನೇ ಶತಮಾನದಲ್ಲೇ ಪುರುಷರಷ್ಟೇ ಮಹಿಳೆಯರು ಸಮಾನರು ಎಂದು ಸಾರಿದವರು. ಅಂಥ ಪುಣ್ಯಾತ್ಮರ ಜಯಂತಿಗಳಿಗೆ ಕೆಲವು ಅಧಿಕಾರಿಗಳು, ಜನಪ್ರತಿನಿಧಿಗಳು ಗೈರಾಗಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಕಾಯಕವೇ ಕೈಲಾಸ ಎಂಬುದು ಬಸವಣ್ಣನವರ ಸಿದ್ಧಾಂತ. ಅದರಂತೆ ರಜಾ ದಿನದಲ್ಲೂ ಒಂದು ತಾಸಾದರೂ ಕಾಯಕವನ್ನು ಮಾಡಿ ಬಸವಣ್ಣ ಅವರ ವಚನಕ್ಕೆ ಗೌರವ ತರಬೇಕು ಎಂದರು. ಪುರಸಭೆ ಉಪಾಧ್ಯಕ್ಷ ಎನ್.ಎಂ.ನಾಗರಾಜ್, ಸದಸ್ಯೆ ಸಹನಾ, ಮೀನಾಕ್ಷಮ್ಮ, ರಾಜು, ಲೋಕೇಶಪ್ಪ, ಆಶ್ರಯ ಸಮಿತಿ ಸದಸ್ಯ ಮುಬಾರಕ್, ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್, ಸಿಬ್ಬಂದಿ ಸ್ವರೂಪ, ಗಿರಿರಾಜ್, ಲೋಕೇಶ್, ಮುಖಂಡ ಮಧು ಬಾವಿಮನೆ ಇದ್ದರು.