ವಿಜಯವಾಣಿ ಸುದ್ದಿಜಾಲ ಕೋಲಾರ
ಪ್ರಥಮ ಪಿಯು ವಿದ್ಯಾರ್ಥಿನಿ ಕಾಲೇಜು ಕ್ಯಾಂಪಸ್‌ನಲ್ಲಿರುವ ಶೌಚಾಲಯದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರದ ನಗರದ ಹೊರವಲಯದಲ್ಲಿರುವ ಖಾಸಗಿ ಕಾಲೇಜು ಒಂದರಲ್ಲಿ ನಡೆದಿದೆ.
ನಗರದ ಹೊರವಲಯದಲ್ಲಿರುವ ಖಾಸಗಿ ಎಸ್.ಎಫ್.ಎಸ್. ಕಾಲೇಜಿನಲ್ಲಿ ಪ್ರಥಮ ಪಿಯು ವಿದ್ಯಾರ್ಥಿನಿಗೆ ಹೆಣ್ಣು ಮಗು ಜನನವಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸೋಮವಾರ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗುವನ್ನು ಸದ್ಯ ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಶ್ರೀನಿವಾಸಪುರ ಮೂಲದ ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯಾಗಿದ್ದು, ಮುಳಬಾಗಿಲಿನ ಅನಿಲ್ ಕುಮಾರ್ ಎಂಬುವವನು ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಈಗ ಪೋಲಿಸರ ವಶದಲ್ಲಿ ಅನಿಲ್ ಕುಮಾರ್ ಇದ್ದಾನೆ.
ಅನಿಲ್ ಕುಮಾರ್ ಶ್ರೀನಿವಾಸಪುರದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ೦೨ ವರ್ಷಗಳಿಂದ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದು, ಮದುವೆ ಮಾಡಿಕೊಳ್ಳುವಂತೆ ಒತ್ತಾಯಪಡಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಗೆ ೧೭ ವರ್ಷ ಪೂರ್ಣಗೊಂಡಿದೆ.
ಕೋಲಾರ ಮಹಿಳಾ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಮತ್ತು ಕಾಲೇಜಿಗೆ ಭೇಟಿ ನೀಡಿ, ಮಾಹಿತಿ ಕಲೆ ಹಾಕಿದ್ದಾರೆ.
ಆಸ್ಪತ್ರೆಯಲ್ಲಿ ದಾಖಲಾಗಿರುವ ವಿದ್ಯಾರ್ಥಿನಿ ನೀಡಿದ ಹೇಳಿಕೆಯನ್ನು ದಾಖಲಿಸಿ ಪೋಲಿಸರು ಅನಿಲ್‌ಕುಮಾರ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.