ನ್ಯೂಸ್

ಕಾಲೇಜು ಪ್ರಾಧ್ಯಾಪಕರಿಗೆ ಕನ್ನಡ ಪುನಶ್ಚೇತನ ಶಿಬಿರ

ಕನ್ನಡ ಪುನಶ್ಚೇತನ ಶಿಬಿರ ಅತ್ಯಂತ ವೈವಿಧ್ಯವಾಗಿ ಮೂಡಿಬಂದಿದೆ ಎಂದು ಪ್ರಸಾರಾಂಗದ ನಿರ್ದೇಶಕ ಡಾ.ನಂಜಯ್ಯ ಹೊಂಗನೂರು ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯದ ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರ ಮತ್ತು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಪದವಿ ಕಾಲೇಜು, ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ 52ನೇ ಕನ್ನಡ ಪುನಶ್ಚೇತನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

34 ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಕನ್ನಡ ಸಾಹಿತ್ಯ ಪರಂಪರೆಯ ಇತ್ತೀಚಿನ ಪ್ರವೃತ್ತಿಗಳನ್ನು ಕುರಿತು ತಮ್ಮ ಪ್ರಬಂಧಗಳನ್ನು ಮಂಡಿಸಿದ್ದಾರೆ. ವೈವಿಧ್ಯಪೂರ್ಣವಾದ ವಿಷಯಗಳಿಂದ ಶಿಬಿರಾರ್ಥಿಗಳು ಪುನಶ್ಚೇತನಗೊಂಡಿದ್ದಾರೆ ಎಂದರು.

ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ನಿರ್ದೇಶಕ ಪ್ರೊ.ಎಚ್.ಪಿ.ಜ್ಯೋತಿ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆ. ಕಲಿಯುವ ಆಸಕ್ತಿ ಇದ್ದರೆ ಜೀವನಪರ್ಯಂತ ಕಲಿಯಬಹುದು. ತಮ್ಮ ಕ್ಷೇತ್ರಗಳಲ್ಲಿ ನೈಪುಣ್ಯತೆ ಸಾಧಿಸಿರುವ ಪ್ರತಿ ವ್ಯಕ್ತಿಗೂ ಪುನಶ್ಚೇತನ ಅಗತ್ಯ ಎಂದರು. ಮೈಸೂರು ವಿವಿ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಿಸಿದೆ. ಮಾಳವಿಯ ಮಿಷನ್ ಆವರಣವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿಸುವುದು ಎಂದು ಹೇಳಿದರು.

ಮಾಳವಿಯ ಮಿಷನ್ ಶಿಕ್ಷಕರ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಡಾ.ಎಲ್.ನಂಜುಂಡಸ್ವಾಮಿ, ಸಂಶೋಧಕ ಶಂಕರ ಇತರರಿದ್ದರು.