ನ್ಯೂಸ್

ಕಾಲೇಜಿನ ಕಾರ್ಯಕ್ರಮಕ್ಕೆ ಹಣದ ಕೊಡದ ಕಾನೂನು ವಿದ್ಯಾರ್ಥಿನಿಯ ಕಿಡ್ನಾಪ್


ಚಿಕ್ಕಬಳ್ಳಾಪುರ: ಕಾಲೇಜಿನ ಸ್ವಾಗತ ಸಮಾರಂಭಕ್ಕೆ ಹಣ ಕೊಡದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿಯು ಸ್ನೇಹಿತರೊಂದಿಗೆ ಸೇರಿಕೊಂಡು ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿ, ಕಿರುಕುಳ ನೀಡಿದ್ದಾನೆ. ಬಟ್ಟೆ ಬಿಚ್ಚಿಸಿದ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡ ಬಳಿಕ ಬೆದರಿಸಿ ಕಳುಹಿಸಿದ್ದಾನೆ.  

ಚಿಕ್ಕಬಳ್ಳಾಪುರದ ಕಾನೂನು ಖಾಸಗೀ ಕಾಲೇಜಿನ ವಿದ್ಯಾರ್ಥಿ ಲೋಕೇಶ್ (25) ಆರೋಪಿ. ಈತ ಕಾಲೇಜಿನ ಹೊಸ ವಿದ್ಯಾರ್ಥಿಗಳ ಸ್ವಾಗತ ಸಮಾರಂಭಕ್ಕೆ 2 ಸಾವಿರ ರೂ ಹಣವನ್ನು ನೀಡಲು ಕೇಳಿದಾಗ ಎಲ್ಎಲ್ ಬಿ 3 ನೇ ವರ್ಷದ ವಿದ್ಯಾರ್ಥಿ ನಿರಾಕರಿಸಿದ್ದಾಳೆ. ಇದರಿಂದ ಇಬ್ಬರ ನಡುವೆ ಪರಸ್ಪರ ಗಲಾಟೆ ನಡೆದಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಲೋಕೇಶ್ ಸ್ನೇಹಿತರೊಂದಿಗೆ ಸೇರಿ ಅವಮಾನಿಸಿದ ಹುಡುಗಿಯನ್ನು ಕಿಡ್ನಾಪ್ ಮಾಡಿದ್ದಾನೆ.

ಬಾಗೇಪಲ್ಲಿ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಮಾತನಾಡುವ ನೆಪದಲ್ಲಿ ಬಂದ ಲೋಕೇಶ್ ಬಲವಂತವಾಗಿ ಚಾಕು ತೋರಿಸಿ ಕಾರಿನಲ್ಲಿ ಕೂರಿಸಿಕೊಂಡು ಆದಿನಾರಾಯಣಸ್ವಾಮಿ ಬೆಟ್ಟಕ್ಕೆ ಕರೆದುಕೊಂಡು ಹೋಗಿದ್ದು ಆತ ಮತ್ತು ಆತನ ಇಬ್ಬರು ಸ್ನೇಹಿತರು ಹಾಕಿ ಬ್ಯಾಟ್ ನಿಂದ ಹಲ್ಲೆ ನಡೆಸಿದರು. ಬಳಿಕ ಬೆದರಿಕೆಯೊಡ್ಡಿ ಬಲವಂತವಾಗಿ ಬಟ್ಟೆಯನ್ನು ಬಿಚ್ಚಿಸಿ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಒಂದು ವೇಳೆ ಪೊಲೀಸರಿಗೇನಾದರೂ ದೂರು ಕೊಟ್ಟರೆ ಯೂ ಟ್ಯೂಬ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಸಿ, ಬಿಟ್ಟು ಹೋಗಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾಳೆ. ಬಾಗೇಪಲ್ಲಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.