ಹುಣಸೂರು: ಏಳು ವಸಂತಗಳ ಹಿಂದೆ ಬೆಂಗಾಡಿನಂತೆ ಕಾಣುತ್ತಿದ್ದ ಕಾಲೇಜು ಆವರಣ ಇಂದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ನೋಡುಗರ ಮನ ತಣಿಸುತ್ತಿದೆ, ಕಾಲೇಜಿನ ಸುತ್ತ ವೃಕ್ಷೋದ್ಯಾನ ನಳನಳಿಸುತ್ತಿದೆ…
ಪಟ್ಟಣದ ಹುಣಸೂರು-ಮೈಸೂರು ಬೈಪಾಸ್ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೊರಾಂಗಣದ ಚಿತ್ರಣವೇ ಇದೀಗ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಹಸಿರು ವನ ಕಾಣುತ್ತಿದೆ. ವನದೊಳಗೆ ಎಲ್ಲಾದರೊಂದು ಕಡೆ ಕಟ್ಟುಮಸ್ತಾದ ವ್ಯಕ್ತಿಯೊಬ್ಬರು ಗಿಡಗಳನ್ನು ನೆಡುತ್ತಾ, ಗಿಡಗಳಿಗೆ ನೀರುಣಿಸುತ್ತಾ ಅಥವಾ ಗಿಡಗಳೊಂದಿಗೆ ಮೌನವಾಗಿ ಮಾತನಾಡುತ್ತಾ ನಿಂತಿರುವ ವ್ಯಕ್ತಿಯನ್ನು ಕಾಣುತ್ತೀರಿ. ಅವರೇ ಈ ಕಾಲೇಜಿನಲ್ಲಿ ಜೀವಕಳೆಯನ್ನು ತಂದ ಪ್ರಾಧ್ಯಾಪಕ ಸಿ.ರವಿ. ಹಸಿರು ವನಕ್ಕಾಗಿ 7ವರ್ಷಗಳಿಂದ ಭಗೀರಥ ಪ್ರಯತ್ನ ನಡೆಸಿ ಯಶಸ್ವಿಯಾದ ಪರಿಸರ ಪ್ರೇಮಿ.
ನಿಸ್ವಾರ್ಥ ಕಲಾವಿದರ ಸೇವಾ ಕಾರ್ಯ: 2009ರಲ್ಲಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಇಲ್ಲಿ ಸೇವೆ ಆರಂಭಿಸಿದ ರವಿ ಕಾಲೇಜಿನ ಸುತ್ತಲ ಪರಿಸರ ಕಂಡು ದಂಗಾಗಿದ್ದರು. ಕಾಲೇಜು ನಿರ್ಮಾಣಕ್ಕಾಗಿ ಹುಣಸೂರಿನ ಸ್ಥಳೀಯ ಕಲಾವಿದರು, ಜನಪ್ರತಿನಿಧಿಗಳು ಒಂದಾಗಿ ಶಿವರಾತ್ರಿ ಜಾಗರಣೆ ದಿನ ಪೌರಾಣಿಕ ನಾಟಕ ಪ್ರದರ್ಶನ ನಡೆಸಿ ಅದರಿಂದ ಬಂದ ಹಣದಿಂದ ಜಾಗವನ್ನು ಖರೀದಿಸಲಾಗಿತ್ತು.
ಅಂತಹ ನಿಸ್ವಾರ್ಥ ಸಮಾಜ ಸೇವಕರಿಂದ ಸಿಕ್ಕ ಜಾಗದಲ್ಲಿ ಒಂದೇ ಒಂದು ಮರವಿಲ್ಲ, ಭೂಮಿಯಲ್ಲಿ ಅಂತರ್ಜಲವಿಲ್ಲ. ಈ ಭೂಮಿಯನ್ನು ಬಂಜರಾಗಿಯೇ ಉಳಿಸಬಾರದೆಂದು ಪಣತೊಟ್ಟರು. 8-10 ಕಡೆ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಲ್ಲೂ ಬರೀ ಇಟ್ಟಿಗೆ, ಸೀಮೆಂಟ್ ಒಳಗೊಂಡ ಕಟ್ಟಡವೆಂಬ ಭಾವನೆ ಬೇರೂರಿತ್ತು.
ಬಂಜರು ಭೂಮಿಯಲ್ಲಿ ಕೈಚಳಕ: ಮೂಲತಃ ಕೃಷಿ ಕುಟುಂಬದಿಂದ ಬಂದಿದ್ದ ರವಿ ಅವರು ವಿದ್ಯಾರ್ಥಿಗಳ ಈ ಮನೋಭಾವನೆಯನ್ನು ಬದಲಿಸಲೇಬೇಕೆಂದು ನಿರ್ಧರಿಸಿದರು. 2013ರಲ್ಲಿ ಕಾಲೇಜಿನ ಒಂದೊಂದೇ ಭಾಗದಲ್ಲಿ ತಂತಿ ಬೇಲಿಗಳನ್ನು ನಿರ್ಮಿಸಿ ಯಾರೂ ಓಡಾಡದಂತೆ ನಿರ್ಬಂಧಿಸಿದರು. ತಿಂಗಳಾಗುವಷ್ಟರಲ್ಲಿ ಬೇಲಿ ಹಾಕಿದ್ದ ಭೂಮಿಯಲ್ಲಿ ಅಲ್ಲಲ್ಲಿ ಹಸಿರು ಹುಲ್ಲುಗಳು ಕಾಣಸಿಕ್ಕವು. ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟು ಸಂಭ್ರಮಿಸಿದ ರವಿ, ಕೂಡಲೇ ಕಾಲೇಜಿನಲ್ಲಿ ಇಕೋ ಕ್ಲಬ್ ಸ್ಥಾಪಿಸಿದರು. ಉತ್ಸಾಹಿ ಯುವ ವಿದ್ಯಾರ್ಥಿಗಳೊಂದಿಗೆ ಸ್ನೇಹ ಸಂಪಾದಿಸಿದರು. ಒಂದೊಂದೇ ಜಾಗವನ್ನು ತಂತಿಬೇಲಿಗಳಿಂದ ಸುತ್ತುವರಿದು ನಿಧಾನವಾಗಿ ಪಾತಿ, ಗುಂಡಿಗಳನ್ನು ತೋಡಿದರು.
ಧರೆಗಿಳಿದ ಭಗೀರಥ: ಇಷ್ಟೆಲ್ಲ ಮಾಡಿದರೂ ನೀರಿನ ಸೌಲಭ್ಯ ಸಿಕ್ಕಿರಲಿಲ್ಲ. ಕಾಲೇಜು ಆವರಣದ ತುಂಬೆಲ್ಲ ಬೋರ್‌ವೆಲ್ ಕೊರೆಯಿಸಿದರೂ ನೀರು ಸಿಗಲಿಲ್ಲ. ಅನತಿ ದೂರೆದಲ್ಲಿರುವ ತೋಟಗಾರಿಕಾ ಇಲಾಖೆಯಿಂದ ಪೈಪ್‌ಲೈನ್ ಮೂಲಕ ಸಂಪರ್ಕ ಪಡೆದು ನೀರು ಒದಗಿಸುವ ಕಾರ್ಯ ನಡೆಸಲಾಯಿತು. ಆದರೂ ನೀರಿನ ಪೂರೈಕೆ ಸಮರ್ಪಕವಾಗಿ ಆಗಲಿಲ್ಲ. ಈ ನಡುವೆ ಮೂರು ವರ್ಷಗಳ ಹಿಂದೆ ಒಂದು ಬೋರ್‌ವೆಲ್‌ನಲ್ಲಿ ಅಲ್ಪ ಪ್ರಮಾಣದ ನೀರು ಸಿಗಲು ಆರಂಭಿಸಿತು. ಇದರಿಂದ ಉತ್ಸಾಹಗೊಂಡ ರವಿ ಇನ್ನಷ್ಟು ಪರಿಶ್ರಮದಿಂದ ಕಾರ್ಯ ಮುಂದುವರಿಸಿದರು.
ತರಹೇವಾರಿ ಸಸ್ಯೋದ್ಯಾನ: ಕಾಲೇಜಿನ ಸಸ್ಯೋದ್ಯಾನದಲ್ಲಿ ಹೊಂಗೆ, ಹಲಸು, ಮಾವು, ನೇರಳೆ, ಸೀಬೆ, ದಾಳಿಂಗೆ, ಸಪೋಟಾ, ಬೇವು, ತೆಂಗು, ತೇಗ, ನೆಲ್ಲಿಕಾಯಿ, ಚೆಕ್ಕೆ, ಸಿಲ್ವಾರ, ರೋಸ್‌ವುಡ್, ಅಮೃತಬಳ್ಳಿ, ಅಲೋವೆರಾ, ಸಂಪಿಗೆ, ಬುಗುರಿ, ಅಂಜೂರಾ, ಬಿದಿರು ಹೀಗೆ ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಎಲ್ಲ ಪ್ಲಾಟ್‌ಗಳಿಗೂ ಕಟಿಂಗ್ ಪ್ಲಾಂಟ್(ದುರಂತೋ ಗಿಡಗಳು)ಗಳೇ ಬೇಲಿಗಳಾಗಿವೆ.
ಫ್ರೆಂಡ್‌ಶಿಪ್ ಗಾರ್ಡನ್: ರವಿ ಅವರ ಕಾರ್ಯಚಟುವಟಿಕೆಯನ್ನು ಗಮನಿಸಿದ ಅವರ ಆಪ್ತ ಸ್ನೇಹಿತ, ‘ನಿನ್ನ ಸೇವೆಯಲ್ಲಿ ನನ್ನದೂ ಅಳಿಲು ಕಾಣಿಕೆಯಿರಲಿ’ ಎಂದು ಆರ್ಥಿಕ ಸಹಾಯ ನೀಡಿದರು. ಆದ ಕಾರಣ ಕಾಲೇಜು ಮುಂಭಾಗದ ಒಂದು ಪ್ಲಾಟ್‌ಗೆ ‘ಫ್ರೆಂಡ್‌ಶಿಪ್ ಗಾರ್ಡನ್’ ಎಂದು ಹೆಸರಿಟ್ಟಿದ್ದಾರೆ. ಅದರಲ್ಲಿ ಹೂವುಗಳ ಲೋಕ ಅರಳಲಿದೆ. ಅಲ್ಲದೆ, ಅದರ ಪಕ್ಕದಲ್ಲೇ ರೋಸ್ ಗಾರ್ಡನ್ ಕೂಡ ಇದ್ದು, ಬಣ್ಣಬಣ್ಣದ ಗುಲಾಬಿ ಹೂವುಗಳು ಅರಳಿ ನಗೆ ಬೀರಲಿವೆ ಎಂದು ರವಿ ಸಂತಸ ವ್ಯಕ್ತಪಡಿಸುತ್ತಾರೆ.
ಹನಿ ನೀರಾವರಿ: ಅವಶ್ಯವಿದ್ದೆಡೆ ಹನಿ ನೀರಾವರಿ ಪದ್ಧತಿ ಮತ್ತು ಸ್ಪ್ರಿಂಕ್ಲರ್‌ಗಳನ್ನು ಬಳಸಿಕೊಳ್ಳಲಾಗಿದೆ. ಕಾಲೇಜಿನ ಮುಂಭಾಗದ ಧ್ವಜಾರೋಹಣ ವೇದಿಕೆಯ ಸುತ್ತ ಕಟಿಂಗ್ ಪ್ಲಾಂಟ್ ಬೆಳೆಸಿ ಸೌಂದರ್ಯ ಹೆಚ್ಚಿಸಲಾಗಿದೆ. ಕಾಲೇಜಿನ ಒಂದು ಭಾಗವನ್ನು ಕಟ್ಟಡ ನಿರ್ಮಾಣ ತ್ಯಾಜ್ಯ ಸುರಿದು ಸಮತಟ್ಟು ಮಾಡಿದ್ದಾರೆ. ಈ ಜಾಗದಲ್ಲಿ 7-8 ಬಾರಿ ಗಿಡಗಳನ್ನು ನೆಟ್ಟರೂ ಸತ್ತುಹೋಗಿದ್ದವು. ಆದರೂ ಪ್ರಯತ್ನ ಬಿಡಲಿಲ್ಲ. ಇಂದು ಈ ಜಾಗದಲ್ಲಿ 10ಕ್ಕೂ ಹೆಚ್ಚು ತೇಗ, ತೆಂಗಿನ ಗಿಡಗಳು ನಳನಳಿಸುತ್ತಿವೆ. ಸರಿಸುಮಾರು ಒಂದು ಎಕರೆ ಭೂಮಿಯಲ್ಲಿ ಸಸ್ಯೋದ್ಯಾನ ಸ್ಥಾಪಿಸಿರುವ ರವಿ ಈ ಕಾರ್ಯಕ್ಕಾಗಿ ತಮ್ಮ ಜೇಬಿನಿಂದ 5-6 ಲಕ್ಷ ರೂ.ಗಳ ಲೆಕ್ಕದಲ್ಲಿ ಹಣ ವ್ಯಯಿಸಿದ್ದಾರೆ. ಪ್ರಾಂಶುಪಾಲ ಡಾ.ವೆಂಕಟೇಶಯ್ಯ ಮತ್ತು ಸಹೋದ್ಯೋಗಿ ಮಿತ್ರರು ಸಕಾರಾತ್ಮಕ ಬೆಂಬಲ ನೀಡಿದ್ದಾರೆ.
ಶೈಕ್ಷಣಿಕ ಪರಿಸರ ನಿರ್ಮಾಣ: ಕಾಲೇಜು ಕೇವಲ ಕಟ್ಟಡ ಎಂದಾಗಬಾರದು. ಶೈಕ್ಷಣಿಕ ಪರಿಸರ ಇದ್ದಲ್ಲಿ ವಿದ್ಯಾರ್ಥಿಗಳಲ್ಲೂ ಶಿಸ್ತು, ಶ್ರದ್ಧೆ ಮೂಡಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಮಿತ್ರರು ಮತ್ತು ಕಾಲೇಜಿನ ಎಲ್ಲರ ಸಹಕಾರದೊಂದಿಗೆ ನನ್ನ ಕೈಲಾದ ಕಾರ್ಯ ನಡೆಸಿದ್ದೇನೆ. ಭೂಮಿತಾಯಿಯನ್ನು ನಂಬಿದರೆ ಕೈಬಿಡೋದಿಲ್ಲ ಎನ್ನುವುದಕ್ಕೆ ಈ ಕಾಲೇಜು ಆವರಣವೇ ಸಾಕ್ಷಿಯಾಗಿದೆ.
ಸಿ.ರವಿ, ಸಹಾಯಕ ಪ್ರಾಧ್ಯಾಪಕ
ರವಿ ಸರ್ ಮಗುವಿನಂತಹ ಮನಸ್ಸಿನವರು. ಗಿಡಗಳು ಮುದುಡಿಕೊಂಡರೆ ಮರುಗುತ್ತಾರೆ. ಅವರ ಕಾಳಜಿ, ಭಾವನೆಗಳಿಂದ ನಾನು ಪ್ರೇರಿತನಾಗಿ ಅವರೊಂದಿಗೆ ದುಡಿದಿದ್ದೇನೆ. ಉತ್ತಮ ಕಾರ್ಯದಲ್ಲಿ ನನ್ನದೂ ಪಾಲು ಇದೆ ಎನ್ನುವ ಸಮಾಧಾನ ನನಗಿದೆ. ಮುಂದೆ ಬರುವ ವಿದ್ಯಾರ್ಥಿಗಳು ಇದನ್ನು ಉಳಿಸಿ ಇನ್ನಷ್ಟು ಬೆಳೆಸಬೇಕೆಂಬುದೇ ನನ್ನ ಆಸೆ.
ಬಿ.ಆರ್.ಅಭಿಷೇಕ್, ತೃತೀಯ ಬಿ.ಎ. ವಿದ್ಯಾರ್ಥಿ