ಭದ್ರಾವತಿ ಹಳೇನಗರದ ಪಶು ಆಸ್ಪತ್ರೆ ಆವರಣದಲ್ಲಿ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಶಾಸಕ ಬಿ.ಕೆ.ಸಂಗಮೇಶ್ವರ್ ಚಾಲನೆ ನೀಡಿದರು. ಡಾ. ಡಿ.ಬಿ.ಶಿವರಾಜ್, ರವಿಕುಮಾರ್ ಇತರರಿದ್ದರು.  
ನ್ಯೂಸ್

ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿಸಿ

ಭದ್ರಾವತಿ: ಹೈನುಗಾರಿಕೆಯಲ್ಲಿ ತೊಡಗಿರುವ ಎಲ್ಲ ರೈತರು ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸುವ ಮೂಲಕ ರೋಗವನ್ನು ಭಾರತದಿಂದ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.

ಪಶು ಇಲಾಖೆಯಿಂದ ಸೋಮವಾರ ಹಳೇನಗರದ ಪಶು ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ 6ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಸು, ಎತ್ತು, ಎಮ್ಮೆ, ಹೋರಿ ಹಾಗೂ ಹಂದಿಗಳಲ್ಲಿ ಕಂಡು ಬರುತ್ತಿರುವ ಮಾರಕ ರೋಗ ಕಾಲುಬಾಯಿ ರೋಗದಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾಗಿ ತಾಲೂಕಿನ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ರೋಗವನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಮುಂದಾಗಬೇಕು. ಆ ಮೂಲಕ ಸರ್ಕಾರದ ಯೋಜನೆ ಪರಿಪೂರ್ಣವಾಗಲು ಸಹಕರಿಸಬೇಕು ಎಂದರು.
ರೋಗಕ್ಕೆ ತುತ್ತಾದ ಹಸುಗಳಿಗೆ ವಿವಿಧ ಸಮಸ್ಯೆಗಳು ಎದುರಾಗುತ್ತವೆ. ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಉತ್ಪಾದನಾ ಸಾಮರ್ಥ್ಯ ನಷ್ಟ ಹಾಗೂ ಹಾಲಿನ ಇಳುವರಿಯೂ ಗಣನೀಯವಾಗಿ ಇಳಿಕೆಯಾಗುವ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಎಲ್ಲ ರೈತರು ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ. ಡಿ.ಬಿ.ಶಿವರಾಜ್, ಕಾಂಗ್ರೆಸ್ ಮುಖಂಡ ರವಿಕುಮಾರ್ ಇತರರಿದ್ದರು.