ಪುಂಡಾನೆ ಸೆರೆ ಹಿಡಿದ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಭೇಟಿ ನೀಡಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅರಣ್ಯ ಇಲಾಖೆ ಅಧಿಕಾರಿಗಳು, ಮಾವುತರು, ಕಾವಾಡಿಗರಿಗೆ ಅಭಿನಂದಿಸಿದರು. 
ನ್ಯೂಸ್

ಕಾರ್ಯಾಚರಣೆ 4 ಗಂಟೆಗಳ ಕಾಲ ವೀಕ್ಷಣೆ

ಎನ್.ಆರ್.ಪುರ: ಒಂಟಿ ಸಲಗ ಹಿಡಿಯುವ ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಟಿ.ಡಿ.ರಾಜೇಗೌಡ ಆಗಮಿಸಿ 4 ಗಂಟೆಗಳ ಕಾಲ ವೀಕ್ಷಣೆ ಮಾಡಿದರು. ಕಾರ್ಯಾಚರಣೆ ಯಶಸ್ಸಿಯಾದ ಮೇಲೆ ಸುದ್ದಿಗಾರರೊಂದಿಗೆ ಮಾತನಾಡಿ, ಕಾನೂರು,ಬಾಳೆ ಗ್ರಾಪಂಯ 10 ಕಿ.ಮೀ. ವ್ಯಾಪ್ತಿಯ ಜಮೀನುಗಳಲ್ಲಿ ಈ ಒಂಟಿ ಸಲಗವು ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಚಿಕ್ಕಮಗಳೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಈ ವಿಷಯವನ್ನು ನಾನು ಪ್ರಸ್ತಾಪ ಮಾಡಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರಿಗೆ ಕಾಡಾನೆ ಹಿಡಿಯುವಂತೆ ಮನವಿ ಮಾಡಿದ್ದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆನೆ ಹಿಡಿಯುವಂತೆ ಸೂಚಿಸಿದರು. ಕೊಪ್ಪ ಡಿಎಫ್‌ಒ ನೇತೃತ್ವದಲ್ಲಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಇಲ್ಲಿನ ಗ್ರಾಮಸ್ಥರು ತುಂಬಾ ಸಹಕಾರ ನೀಡಿದ್ದಾರೆ ಎಂದರು.

ದುಬಾರೆಯಿಂದ ಆನೆಯ ಜತೆ ಬಂದಿದ್ದ ಕಾವಾಡಿಗ ತೌಫಿಕ್ ಎಂಬುವರಿಗೆ ಒಂಟಿ ಸಲಗದ ಸೊಂಡಿಲು ತಾಗಿ ಮುಖಕ್ಕೆ ಸಣ್ಣ ಪೆಟ್ಟಾಯಿತು. ಸ್ಥಳದಲ್ಲಿದ್ದ ವೈದ್ಯರು, ಸಿಬ್ಬಂದಿ ಅವರಿಗೆ ಉಪಚರಿಸಿ ಚಿಕಿತ್ಸೆ ನೀಡಿದರು. ಕಾಡಾನೆ ಹಿಡಿಯುವ ಕಾರ್ಯಾಚರಣೆ ವೀಕ್ಷಿಸಲು ಸಾವಿರಾರು ರೈತರು ಆಗಮಿಸಿದ್ದರು. ಆದರೆ ಪೊಲೀಸರು ರಸ್ತೆಯಲ್ಲೇ ಬ್ಯಾರಿಕೇಡ್ ಹಾಕಿ ಬಿಗಿ ಬಂದೋಬಸ್ತು ಮಾಡಿದ್ದರಿಂದ ನೂರಾರು ಜನರು ಗುಡ್ಡೇಹಳ್ಳ ಮುಖ್ಯ ರಸ್ತೆಯಲ್ಲೇ ಉಳಿದು ಕಾರ್ಯಾಚರಣೆ ಮುಗಿಸಿ ಆನೆಯು ಲಾರಿಯಲ್ಲಿ ಹೋಗುವ ದೃಶ್ಯವನ್ನು ವೀಕ್ಷಣೆ ಮಾಡಿದರು.

ಸ್ಥಳೀಯ ಕೃಷಿಕ ಮನೋಹರ ಮಾತನಾಡಿ, ಕಾನೂರು ಗ್ರಾಪಂ ಸಂಕ್ಸೆ ಗ್ರಾಮದ ಗುಡ್ಡೇಹಳ್ಳ, ಗುಂಡ್ವಾನಿ, ನೇರ್ಲೆ, ಕಾಸನ, ಚಿಟ್ಟಿ ಕೊಡಿಗೆ, ಬಾಳೆಹಿತ್ತಲು ಮುಂತಾದ ಗ್ರಾಮಗಳಲ್ಲಿ ಈ ಒಂಟಿ ಸಲಗದ ಹಾವಳಿ ಹೆಚ್ಚಾಗಿತ್ತು. 2024 ರ ಜುಲೈನಲ್ಲಿ ಈ ಒಂಟಿ ಸಲಗ ಸಂಕ್ಸೆ ಗ್ರಾಮಕ್ಕೆ ಬಂದಿದ್ದು ಮತ್ತೆ ಹೋಗಿಲ್ಲ. ಅಡಕೆ, ಭತ್ತ, ತೆಂಗು ಹಾಗೂ ಬಾಳೆ ತೋಟವನ್ನು ನಿರಂತರವಾಗಿ ಹಾಳು ಮಾಡುತ್ತಿತ್ತು. ಆದರೆ ಗ್ರಾಮಸ್ಥರಿಗೆ ಏನು ಅಪಾಯ ಮಾಡಿಲ್ಲ. ರೈತರು ಐಬೆಕ್ಸ್ ಬೇಲಿ ಮಾಡಿದ್ದರೂ ಬೇಲಿ ತುಂಡು ಮಾಡಿ ಜಮೀನಿಗೆ ನುಗ್ಗುತ್ತಿತ್ತು. ಆದ್ದರಿಂದ ಈ ಒಂಟಿ ಸಲಗ ಹಿಡಿಯುವಂತೆ ಶಾಸಕ ಟಿ.ಡಿ.ರಾಜೇಗೌಡರಿಗೆ ಗ್ರಾಮಸ್ಥರು ಮನವಿ ಮಾಡಿದ್ದೆವು. ಶಾಸಕರು ಅರಣ್ಯ ಮಂತ್ರಿಯವರಿಗೆ ತೀವ್ರ ಒತ್ತಡ ಹಾಕಿ ಒಂಟಿ ಸಲಗ ಹಿಡಿಯಲು ಕಾರಣರಾಗಿದ್ದಾರೆ ಎಂದರು.