ನ್ಯೂಸ್

ಕಾರ್ಯಕ್ರಮಗಳು ರೈತರಿಗೆ ತಲುಪಲಿ, ಡಿಸಿ ಕಚೇರಿಯಲ್ಲಿ ಅಧಿಕಾರಿಗಳಿಗೆ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಸೂಚನೆ

ರಾಮನಗರ :  ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾದ ನಂತರ ಪಶುಸಂಗೋಪನೆ ಇಲಾಖೆ ಜವಾಬ್ದಾರಿ ಹೆಚ್ಚಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ ಅಕ್ರಮವಾಗಿ ಗೋವುಗಳ ಸಾಗಣೆ ಮತ್ತು ವಧೆ ಬಗ್ಗೆ ಅಧಿಕಾರಿಗಳು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಎಚ್ಚರವಹಿಸಬೇಕು.

ರೈತರು ಗಂಡು ಕರುಗಳನ್ನು ಸಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಡುತ್ತಿರುವುದು ಗಮನಕ್ಕೆ ಬಂದಿದೆ. ಇಲಾಖೆ ಅಧಿಕಾರಿಗಳು ರೈತರೊಂದಿಗೆ ಸಮಾಲೋಚನೆ ನಡೆಸಿ ಕನಿಷ್ಠ ಮೂರು ತಿಂಗಳವರೆಗೆ ಸಾಕಿ ಗೋಶಾಲೆಗಳಿಗೆ ಬಿಡುವಂತೆ ಜಾಗೃತಿ ಮೂಡಿಸಿ ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಸುಮಾರು 1,45,095 ಕುಟುಂಬಗಳು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದು, 6,13,337 ಪಶು ಸಂಪತ್ತು ಇರುವುದು ಸಂತಸದ ಸಂಗತಿ. ಹಾಗೆಯೇ ಕೃತಕ ಗರ್ಭಧಾರಣೆ ಕಾರ್ಯಕ್ರಮ ಶೇ.68 ಪ್ರಗತಿ ಹೊಂದಿರುವುದು ಸಂತಸದ ವಿಚಾರ. ಆದರೆ, ಇಲಾಖೆ ಕಾರ್ಯಕ್ರಮಗಳು ರೈತರಿಗೆ ಮುಟ್ಟಬೇಕು ಮತ್ತು ಶೇ.100 ಪ್ರಗತಿ ಕಾಣಬೇಕು ಎಂದು ತಿಳಿಸಿದರು.

ಸ್ಥಳದಲ್ಲೇ ನೆರವು: ಜಿಲ್ಲೆಯಲ್ಲಿ ಹೂವು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬರು ಕರೊನಾದಿಂದ ಮೃತಪಟ್ಟಿದ್ದು, ಅವರ ಪತ್ನಿ, ಪ್ರಭು ಚವ್ಹಾಣ್ ಅವರಿಗೆ ಕುಟುಂಬ ಕಷ್ಟದಲ್ಲಿದ್ದು, ಇಬ್ಬರು ಮಕ್ಕಳು ವಿದ್ಯಾಭ್ಯಾಸ ಮಾಡಿಸಬೇಕಿದ್ದು, ಸಹಾಯ ಮಾಡುವಂತೆ ಮನವಿ ಸಲ್ಲಿಸಿದರು. ಸಚಿವರು ಸ್ಥಳದಲ್ಲಿಯೇ ವೈಯಕ್ತಿಕವಾಗಿ 50,000 ರೂ. ನಗದು ನೀಡಿ ಮಾನವೀಯತೆ ಮೆರೆದರು.

ಯಾವುದೇ ಕಾರಣಕ್ಕೂ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಿ, ಸರ್ಕಾರ ನೀಡುವ ಸವಲತ್ತುಗಳನ್ನು ಬಳಸಿಕೊಳ್ಳಿ ಎಂದು ಹೇಳಿ, ಪಶುಸಂಗೋಪನಾ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಅವಕಾಶವಿದ್ದಲ್ಲಿ ಮಹಿಳೆಗೆ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸಚಿವ ತಿಳಿಸಿದರು.

ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇಕ್ರಂ, ಪಶುಸಂಗೋಪನೆ ಇಲಾಖೆ ಉಪನಿರ್ದೇಶಕರು ಡಾ.ಸಿದ್ದರಾಮಾಯ್ಯ, ಡಿವೈಎಸ್‌ಪಿ ಮೋಹನ್ ಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಹಾಜರಿದ್ದರು.

ಪ್ರಾಣಿ ಕಲ್ಯಾಣ ಮಂಡಳಿಯ ಸ್ಥಾಪನೆ :  ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಚವ್ಹಾಣ್, ಪ್ರಾಣಿ ಹಿಂಸೆ ತಡೆಯುವ ಕಾನೂನುಗಳನ್ನು ಬಿಗಿಗೊಳಿಸಲು ಕ್ರಮ ವಹಿಸಿ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿ ಕರ್ನಾಟಕ ಪ್ರಾಣಿಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಪ್ರಾಣಿಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಕ್ಕೆ ಕಾಲಕಾಲಕ್ಕೆ ಮಂಡಳಿ ಸಲಹೆ ನೀಡಲಿದೆ ಎಂದು ತಿಳಿಸಿದರು.