ಬಿಡದಿ : ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ಇಎಸ್‌ಐ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಶಾಸಕ ಎ.ಮಂಜುನಾಥ್ ತಿಳಿಸಿದರು.
ಪಟ್ಟಣದ ಹೌಸಿಂಗ್‌ಬೋರ್ಡ್ ಕಾಲನಿಯಲ್ಲಿರುವ ಶಾಸಕರ ಕಚೇರಿ ಬಳಿ ಕಾರ್ಮಿಕ ಇಲಾಖೆ ವತಿಯಿಂದ ನೀಡಲಾದ ಆಹಾರ ಕಿಟ್‌ಗಳನ್ನು 600 ನೋಂದಾಯಿತ ಕಾರ್ಮಿಕರಿಗೆ ಶನಿವಾರ ವಿತರಿಸಿ ಮಾತನಾಡಿದರು.
ಬಿಡದಿ ಭಾಗದ ಪ್ರತಿಷ್ಟಿತ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಆರೋಗ್ಯ ಸೇವೆ ಒದಗಿಸಲು ಇಎಸ್‌ಐ ಆಸ್ಪತ್ರೆ ಅವಶ್ಯಕತೆಯಿದೆ. ಹಾಗಾಗಿ ಬಿಡದಿ-ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ನಡುವೆ ಜಾಗವಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ನಾನು ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಮಾಗಡಿ ವಿಧಾನಸಭಾ ಕ್ಷೇತ್ರಕ್ಕೆ 5 ಸಾವಿರ ಆಹಾರ ಕಿಟ್‌ಗಳನ್ನು ಒದಗಿಸಿದ್ದು, ಬಿಡದಿ ಭಾಗದ 800 ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿದ್ದಾರೆ. ಆದರೆ, 600 ಕಾರ್ಮಿಕರು ಮಾತ್ರ ನವೀಕರಿಸಿದ್ದು, ಉಳಿದ ಅಸಂಘಟಿತ ಕಾರ್ಮಿಕರು ಸಹ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು. ಹಾಗೂ ಕಾರ್ಮಿಕ ಇಲಾಖೆ ಸವಲತ್ತುಗಳ ಬಗ್ಗೆ ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲೂ ಪ್ರಚಾರ ಮಾಡಿ, ಕರಪತ್ರ ಹಂಚಿ ಆಂದೋಲನದ ಮಾದರಿ ಕಾರ್ಮಿಕರನ್ನು ನೋಂದಣಿ ಮಾಡಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ತಾಲೂಕು ಕಾರ್ಮಿಕ ಕಲ್ಯಾಣಾಧಿಕಾರಿ ಯತೀಶ್‌ಕುಮಾರ್ ಮಾತನಾಡಿ, ನೋಂದಾಯಿತ ಕಾರ್ಮಿಕರಿಗೆ ಇಲಾಖೆಯಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಮದುವೆಗೆ, ಹೆರಿಗೆ ಸಹಾಯಧನ, ಶೈಕ್ಷಣಿಕ ಸಹಾಯ, ಸ್ವಾಭಾವಿಕ ಮರಣ ಹೊಂದಿದವರಿಗೆ ಪರಿಹಾರ, ಮನೆ ಗೃಹಭಾಗ್ಯ ಯೋಜನೆ, ಪಿಂಚಣಿ ಸೌಲಭ್ಯಗಳು ಲಭ್ಯವಿವೆ. ಹಾಗಾಗಿ ಅಸಂಘಟಿತ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡು ಸೌಲಭ್ಯ ಪಡೆಯುವಂತೆ ಮನವಿ ಮಾಡಿದರು.
ಬಿಡದಿ ಪುರಸಭೆ ಮಾಜಿ ಸದಸ್ಯರಾದ ಬಿ.ಎಂ.ರಮೇಶ್‌ಕುಮಾರ್, ದೇವರಾಜು, ರಾಕೇಶ್, ಕುಮಾರ್, ಪುಟ್ಟಮಾದಯ್ಯ, ಮುಖಂಡರಾದ ರಮೇಶ್(ವಾಲಿ), ಸೋಮೇಗೌಡ, ಧನಂಜಯ್ಯ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ರಘು, ಮಾಜಿ ಅಧ್ಯಕ್ಷ ನರಸಿಂಹಯ್ಯ, ನಿರ್ದೇಶಕ ರಾಮಯ್ಯ ಬೈರಮಂಗಲ ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಸಿದ್ದರಾಜು, ಮಾಗಡಿ ಪುರಸಭಾ ಸದಸ್ಯ ಬಾಲರಾಜು, ಕನಕಪುರ ತಾಪಂ ಮಾಜಿ ಸದಸ್ಯ ಲಕ್ಷ್ಮಣ್ ಕಾರ್ಮಿಕ ಇಲಾಖೆ ನಿರೀಕ್ಷಕ ಸುರೇಶ್ ಮತ್ತಿತರರು ಭಾಗವಹಿಸಿದ್ದರು.