ಮೂವರನ್ನು ಬಲಿ ಪಡೆದ ಕಾರು 
ನ್ಯೂಸ್

ಕಾರ್ಮಿಕರ ಮೇಲೆ ಹರಿದ ಕಾರು

ಸುಳ್ಯ: ಜಾಲ್ಸೂರು ಗ್ರಾಮದ ಅಡ್ಕಾರಿನ ಬಳಿ ರಸ್ತೆ ಬದಿ ನಿಂತಿದ್ದ ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚೆನ್ನಪ್ಪ(50), ರೇಗಪ್ಪ(44) ಹಾಗೂ ಮಾಂತೇಶ್(63) ಮೃತಪಟ್ಟವರು.ರಾಣೆಬೆನ್ನೂರಿನ ವೆಂಕಪ್ಪ ಎಂಬುವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಡ್ಕಾರಿನ ಹೊಟೇಲ್ ಒಂದರ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದ ನಾಲ್ವರು ಕಾರ್ಮಿಕರಿಗೆ ಹುಣಸೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಗುರುವಾರ ಡಿಕ್ಕಿ ಹೊಡೆದಿದೆ. ಕಾರ್ಮಿಕರಿಗೆ ಡಿಕ್ಕಿ ಹೊಡೆದು ಪಕ್ಕದಲ್ಲಿ ನಿಂತಿದ್ದ ಲಾರಿಗೂ ಕಾರು ಡಿಕ್ಕಿ ಹೊಡೆದಿದೆ.

ದುರ್ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೀರ್ವರು ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಲಿಗಾಗಿ ಬಂದು ಹೆಣವಾದರು!

ಗುತ್ತಿಗೆದಾರರೊಬ್ಬರ ಆಹ್ವಾನದ ಮೇರೆಗೆ ಹಾವೇರಿ ಕಡೆಯ ಒಟ್ಟು ಹತ್ತು ಮಂದಿ ಕೂಲಿ ಕಾರ್ಮಿಕರು ಬುಧವಾರವಷ್ಟೇ ಕೆಲಸಕ್ಕಾಗಿ ಸುಳ್ಯಕ್ಕೆ ಬಂದಿದ್ದರು. ಅಡ್ಕಾರಿನ ಅಂಗಡಿಯೊಂದರ ಮುಂಭಾಗ ರಾತ್ರಿಯಿಡೀ ಮಲಗಿದ್ದರು. ಗುರುವಾರ ಬೆಳಗ್ಗೆ ಈ ಹತ್ತು ಮಂದಿಯ ಪೈಕಿ ನಾಲ್ವರು ರಸ್ತೆ ಬದಿ ನಿಂತಿದ್ದರು.ಈ ಪೈಕಿ ಮೂವರನ್ನು ವೇಗವಾಗಿ ಬಂದ ಕಾರು ಬಲಿ ಪಡೆದಿದೆ.