ಬಾಳೆಹೊನ್ನೂರು: ಕಾರ್ಗಿಲ್ ವಿಜಯ ದಿವಸ ದೇಶದ ಹೆಮ್ಮೆಯ ಯೋಧರ ಸಾಹಸ ಮತ್ತು ತ್ಯಾಗದ ಪ್ರತೀಕ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಜೆ.ವಿಕ್ರಮ್ ಹೇಳಿದರು.
ಕಾರ್ಗಿಲ್ ವಿಜಯ ದಿನದ ಹಿನ್ನೆಲೆಯಲ್ಲಿ ಪಟ್ಟಣದ ಲಯನ್ಸ್ ಕ್ಲಬ್‌ಯಿಂದ ನಿವೃತ್ತ ಯೋಧ, ಗ್ರಾಪಂ ಅಧ್ಯಕ್ಷ ರವಿಚಂದ್ರ ಅವರನ್ನು ಗುರುವಾರ ಸನ್ಮಾನಿಸಿ ಅವರು ಮಾತನಾಡಿದರು.
ಕಾರ್ಗಿಲ್ ಯುದ್ಧವು ಭಾರತೀಯ ಸೇನೆಯ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಅಮರ ಕಥೆ. ದೇಶಕ್ಕಾಗಿ ಪ್ರಾಣಕೊಟ್ಟ ಹುತಾತ್ಮರನ್ನು ನಾವೆಲ್ಲರೂ ಸ್ಮರಿಸಬೇಕಾದ ದಿನವಾಗಿದೆ ಹಾಗೂ ಅದು ನಮ್ಮ ಕರ್ತವ್ಯವೂ ಆಗಿದೆ.
ಇಂದಿನ ದಿನಗಳಲ್ಲಿ ಯುವಜನರಲ್ಲಿ ದೇಶಭಕ್ತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರ್ಕಾರಗಳು ಪಠ್ಯ ಪುಸ್ತಕದಲ್ಲಿ ದೇಶದ ಹೆಮ್ಮೆಯ ಯೋಧರ ಕುರಿತು ಪಠ್ಯವನ್ನು ರಚಿಸಬೇಕಿದೆ. ಕಾರ್ಗಿಲ್ ವಿಜಯ ದಿನದಂದು ದೇಶದ ಹೆಮ್ಮೆಯ ಯೋಧರನ್ನು ಗೌರವಿಸಿದರೆ ಈ ದಿನಕ್ಕೆ ವಿಶೇಷವಾದ ಅರ್ಥ ಬರಲಿದೆ ಎಂದರು.
ರೈತ ಮತ್ತು ಯೋಧ ದೇಶದ ಬೆನ್ನೆಲುಬಾಗಿದ್ದು ಇವರಿಬ್ಬರೂ ಇಲ್ಲದೆ ದೇಶದ ಪರಿಸ್ಥಿತಿಯನ್ನು ಊಹಿಸಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಲಯನ್ಸ್ ಸಂಸ್ಥೆಯು ಕಾರ್ಗಿಲ್ ದಿನದ ಅಂಗವಾಗಿ ನಿವೃತ್ತ ಯೋಧರನ್ನು ಗೌರವಿಸುವ ಕೆಲಸ ಮಾಡುತ್ತಿದೆ ಎಂದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಸುಧಾಕರ್, ಖಜಾಂಚಿ ಕೆ.ಸಿ.ರವೀಂದ್ರ, ಸ್ಥಾಪಕ ಅಧ್ಯಕ್ಷ ಎಂ.ಆರ್.ಮಂಜುನಾಥ್, ಗ್ರಾಪಂ ಸದಸ್ಯ ಸದಾಶಿವ ಆಚಾರ್ಯ, ಕೆ.ಪ್ರಭಾಕರ್, ಸ್ಥಳೀಯರಾದ ಡೇವಿಡ್ ಡಿಸೋಜ ಮತ್ತಿತರರು ಹಾಜರಿದ್ದರು.