ನ್ಯೂಸ್

ಕಾರಿನಲ್ಲಿಟ್ಟಿದ್ದ ರಿವಾಲ್ವಾರ್ ನಾಪತ್ತೆ

ಮೈಸೂರು: ರಿಪೇರಿಗೆ ಬಿಟ್ಟಿದ್ದ ವೇಳೆ ಕಾರಿನಲ್ಲಿದ್ದ ರಿವಾಲ್ವಾರ್ ನಾಪತ್ತೆಯಾಗಿದ್ದು, ಈ ಸಂಬಂಧ ನಗರದ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಶಾಲನಗರ ಮಂಗಲಾ ಗ್ರಾಮದ ಕಾಫಿ ಎಸ್ಟೇಟ್ ಮಾಲೀಕ ತಿಮ್ಮಯ್ಯ ಅವರಿಗೆ ಸೇರಿದ್ದ ರಿವಾಲ್ವಾರ್ ನಾಪತ್ತೆಯಾಗಿದೆ. ತಿಮ್ಮಯ್ಯ ಅವರು ತಮ್ಮ ಆತ್ಮರಕ್ಷಣೆಗಾಗಿ 2016ರಲ್ಲಿ ರಿವಾಲ್ವಾರ್ ಹಾಗೂ 100 ಲೈವ್ ಬುಲೆಟ್‌ಗಳನ್ನೂ ಸಹ ಖರೀದಿಸಿದ್ದರು. ತಮ್ಮ ಫೋರ್ಡ್ ಕಾರನ್ನು ರಿಪೇರಿ ಮಾಡಿಸಲು ತಿಮ್ಮಯ್ಯ ಮೈಸೂರಿಗೆ ಆಗಮಿಸಿದ್ದರು. ಟಿಪ್ಪು ಸರ್ಕಲ್ ಬಳಿಯ ಗ್ಯಾರೇಜ್‌ನಲ್ಲಿ ಕಾರನ್ನು ರಿಪೇರಿಗೆ ಬಿಟ್ಟಿದ್ದರು. ಈ ಮಧ್ಯೆ ತಮ್ಮ ಪ್ಯಾಂಟ್ ಜೇಬಿನಲ್ಲಿದ್ದ ರಿವಾಲ್ವಾರ್ ಹಾಗೂ 8 ಬುಲೆಟ್‌ಗಳನ್ನು ಡ್ರೈವರ್ ಸೀಟ್‌ನ ಜಿಪ್ ಪರ್ಸ್‌ನಲ್ಲಿಟ್ಟಿದ್ದರು.

ನಂತರ ರಿಪೇರಿಯಾದ ಕಾರನ್ನು ಹಿಂಪಡೆದು ತಾವು ತಂಗಿದ್ದ ಲಾಡ್ಜ್‌ಗೆ ಹಿಂದಿರುಗಿ, ಪರಿಶೀಲಿಸಿದ್ದಾಗ ರಿವಾಲ್ವಾರ್ ನಾಪತ್ತೆಯಾಗಿದೆ. ಬಳಿಕ ಈ ಸಂಬಂಧ ಗ್ಯಾರೇಜ್ ಮಾಲೀಕನನ್ನು ವಿಚಾರಿಸಿದಾಗ ಆತ ನನಗೆ ಗೊತ್ತಿಲ್ಲ ಎಂದು ಉತ್ತರ ನೀಡಿದ್ದಾನೆ. ಈ ಸಂಬಂಧ ತಮ್ಮ ರಿವಾಲ್ವಾರ್ ಪತ್ತೆ ಹಚ್ಚಿಕೊಡುವಂತೆ ತಿಮ್ಮಯ್ಯ ಎನ್.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.