ನ್ಯೂಸ್

ಕಾರಾಗೃಹದಿಂದ ಶಿವಮೂರ್ತಿ ಶರಣರ ಬಿಡುಗಡೆ

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶದ ಷರತ್ತಿನನ್ವಯ ನಗರದ ಜಿಲ್ಲಾ ಕಾರಾಗೃಹದಿಂದ ಬಿಡುಗಡೆ ಮಾಡಲು ಸೋಮವಾರ ನಿರ್ದೇಶಿಸಿತು. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ನೇರ ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಶರಣರು ತೆರಳಿದರು.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ, ಮುಖ್ಯ ಸಾಕ್ಷಿದಾರರ ವಿಚಾರಣೆ, ಅಡ್ಡ ಪರೀಕ್ಷೆ (ಕ್ರಾಸ್ ಎಕ್ಸಾಮಿನೆಷನ್) ಪೂರ್ಣಗೊಳಿಸಲು ನಾಲ್ಕು ತಿಂಗಳು ಗಡುವು ನೀಡಿತ್ತು.

ಅದರಂತೆ ಸಂತ್ರಸ್ತ ಬಾಲಕಿಯರು ಒಳಗೊಂಡು ಮೊದಲ ಪ್ರಕರಣದಲ್ಲಿ 13, ಎರಡನೇ ಪ್ರಕರಣದಲ್ಲಿ 12 ಮುಖ್ಯ ಸಾಕ್ಷಿದಾರರ ವಿಚಾರಣೆ ಸೋಮವಾರಕ್ಕೆ ಬಹುತೇಕ ಪೂರ್ಣಗೊಂಡಿತು. ಈ ಹಿನ್ನೆಲೆಯಲ್ಲಿ ಕಾರಾಗೃಹದಿಂದ ಬಿಡುಗಡೆಗೊಳಿಸಲು ಶರಣರ ಪರ ಹೈಕೋರ್ಟ್ ವಕೀಲ ಸಿ.ವಿ.ನಾಗೇಶ್ ಅವರು ಮನವಿ ಮಾಡಿಕೊಂಡರು.

ಇದನ್ನು ಪರಿಶೀಲಿಸಿದ ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು ಕಾರಾಗೃಹದಿಂದ ಬಿಡುಗಡೆಗೆ ನಿರ್ದೇಶನ ನೀಡಿದ್ದು, ಇನ್ನುಳಿದ ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ.

ಹಿನ್ನೆಲೆ: ಮೊದಲ ಪೋಕ್ಸೋ ಪ್ರಕರಣದಲ್ಲಿ ಎ1 ಆರೋಪಿಯಾದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ 2023ರ ನ. 8ರಂದು ಜಾಮೀನು ನೀಡಿತ್ತು. ಆರೋಪಿ ಪ್ರಬಲರಾಗಿದ್ದು, ಸಾಕ್ಷಿ ನಾಶಪಡಿಸುವ, ಪ್ರಾಬಲ್ಯ ಬೀರುವ ಸಾಧ್ಯತೆ ಇದೆ ಎಂದು ಜಾಮೀನು ಮಂಜೂರು ಪ್ರಶ್ನಿಸಿ ಸಂತ್ರಸ್ತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಮುಖ್ಯ ಸಾಕ್ಷಿ ವಿಚಾರಣೆ, ಅಡ್ಡ ಪರೀಕ್ಷೆ ಪೂರ್ಣಗೊಳ್ಳುವವರೆಗೂ ಬಂಧನದಲ್ಲಿರಲು ಸೂಚಿಸಿತ್ತು. ಅದರಂತೆ 2024ರ ಏ. 23ರಂದು ಪುನಾ ನ್ಯಾಯಾಲಯಕ್ಕೆ ಹಾಜಗಾಗಿದ್ದರು. ನಂತರ ಕಾರಾಗೃಹ ಸೇರಿದ್ದರು.

ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಇಲ್ಲಿಯ ನ್ಯಾಯಾಧೀಶರು ವಿಚಾರಣೆ, ಅಡ್ಡ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಮುಖ್ಯ ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ಹಿಂದಿನ ಜಾಮೀನು ಅನ್ವಯವಾಗಲಿದ್ದು, ಅದರಂತೆ ಬಿಡುಗಡೆಗೊಳಿಸಲು ಆದೇಶಿಸಿದ್ದಾರೆ ಎಂದು ಶರಣರ ಪರ ವಕೀಲ ಕೆ.ಎನ್.ವಿಶ್ವನಾಥಯ್ಯ ತಿಳಿಸಿದರು.

ಹೈಕೋರ್ಟ್ ಆದೇಶದನ್ವಯ ಚಿತ್ರದುರ್ಗ ಪ್ರವೇಶಿಸಲು ಅನುಮತಿ ಇಲ್ಲ. ಹೀಗಾಗಿ ಅನುಮತಿ ನೀಡಲು ಕೋರಿ ಹೈಕೋರ್ಟಿಗೆ ಶರಣರ ಪರ ವಕೀಲರು ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಮುಖ್ಯ ಸಾಕ್ಷಿಗಳ ವಿಚಾರಣೆ ಪೂರ್ಣ: ಮೊದಲ ಪ್ರಕರಣದಲ್ಲಿ ಎರಡು ಎಫ್‌ಐಆರ್ ದಾಖಲಾಗಿದ್ದು, ಸಂಖ್ಯೆ 181ರ ಅಡಿ 83, ಸಂಖ್ಯೆ 182ರ ಅಡಿ 79 ಸಾಕ್ಷಿಗಳ ವಿಚಾರಣೆ ನಡೆಯಬೇಕು. ಆದರೆ, ಅಷ್ಟು ಸಾಕ್ಷಿಗಳ ವಿಚಾರಣೆಗೆ ಸಾಕಷ್ಟು ಕಾಲಾವಕಾಶ ಬೇಕಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುಖ್ಯ ಸಾಕ್ಷಿದಾರರ ವಿಚಾರಣೆ, ಅಡ್ಡ ಪರೀಕ್ಷೆ ಬಹುತೇಕ ಪೂರ್ಣಗೊಂಡಿದೆ ಎಂಬ ಮಾಹಿತಿ ಇದೆ.

ಮುರುಘೇಶನ ದಯೆಯಿಂದ ಬಿಡುಗಡೆ: ಬಸವೇಶ, ಮುರುಘೇಶನ ದಯೆಯಿಂದಾಗಿ ಕಾರಾಗೃಹದಿಂದ ಬಿಡುಗಡೆಯಾಗಿದೆ. ಕಾನೂನು ಹೋರಾಟ ಮುಂದುವರೆಯಲಿದ್ದು, ಸತ್ಯಕ್ಕೆ ಜಯ ಸಿಗುವ ವಿಶ್ವಾಸವಿದೆ. ಪ್ರತಿ ಹೆಜ್ಜೆ ಜಾಗರೂಕತೆಯಿಂದ ಇಡಲಾಗುವುದು ಎಂದು ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ಬಸವಪ್ರಭು ಶ್ರೀ, ಬಸವಾದಿತ್ಯ ದೇವರು, ಆರೋಪಿ ಪರ ವಕೀಲರಾದ ಕೆ.ಎನ್.ವಿಶ್ವನಾಥಯ್ಯ, ಎಂ.ಉಮೇಶ್, ವಿಶ್ವನಾಥ್, ಪ್ರತಾಪ್‌ಜೋಗಿ, ಜೀತೇಂದ್ರ ಹುಲಿಕುಂಟೆ, ಆನಂದಪ್ಪ, ಕರಿಯಪ್ಪ, ಮೂರ್ತಿ, ಪೈಲ್ವಾನ್ ತಿಪ್ಪೇಸ್ವಾಮಿ, ಶಫೀವುಲ್ಲಾ ಇತರರಿದ್ದರು.

ಟೈಮ್‌ಲೈನ್:
| ಶರಣರ ವಿರುದ್ಧ ಮೈಸೂರು ನಜರಾಬಾದ್ ಠಾಣೆಯಲ್ಲಿ 2022ರ ಆ. 26ರಂದು ಮೊದಲ ಪೋಕ್ಸೋ ಪ್ರಕರಣ ದಾಖಲು.
| 27ಕ್ಕೆ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಪ್ರಕರಣ ವರ್ಗಾವಣೆ.
| ಸೆ. 1ರಂದು ಬಂಧನ.
| 2ರಂದು ನ್ಯಾಯಾಲಯಕ್ಕೆ ಹಾಜರು.
| ಸ್ಥಳೀಯ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ.
| ಹೈಕೋರ್ಟ್‌ನಿಂದ 2023ರ ನ. 8ರಂದು ಷರತ್ತುಬದ್ಧ ಜಾಮೀನು ಮಂಜೂರು.
| ನ. 16ರಂದು ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ, ದಾವಣಗೆರೆಯ ವಿರಕ್ತ ಮಠದಲ್ಲಿ ವಾಸ್ತವ್ಯ.
| ಜಾಮೀನು ಪ್ರಶ್ನಿಸಿ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ.
| ಸ್ಥಳೀಯ ನ್ಯಾಯಾಲಯೆಕ್ಕೆ ಹಾಜರಾಗಲು ಸುಪ್ರೀಂ ಕೋರ್ಟ್ ಆದೇಶ.
| ಸುಪ್ರೀಂ ನಿರ್ದೇಶನದಂತೆ 2024ರ ಏ. 23ರಂದು ನ್ಯಾಯಾಲಯಕ್ಕೆ ಸ್ವಾಮೀಜಿ ಹಾಜರು.