ಬೆಂಗಳೂರು: ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮತ್ತು ಮಾರಾಟ ಆರೋಪ ಪ್ರಕರಣಕ್ಕೆ ಸಂಬಂಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶಾಸಕ ಸತೀಶ್ ಸೈಲ್‌ಗೆ ವಿಧಿಸಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟಿರುವ ಹೈಕೋರ್ಟ್, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ಅಂತಿಮ ಆದೇಶ ಹೊರ ಬೀಳುವವರೆಗೂ ಕಾರವಾರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಸದಂತೆ ನಿರ್ದೇಶಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಧಿಸಿರುವ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕೋರಿ ಸತೀಶ್ ಸೈಲ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಜತೆಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೆ, ಅ.24ರಂದು ವಿಶೇಷ ನ್ಯಾಯಾಲಯ ಮಾಡಿರುವ ಆದೇಶಕ್ಕೆ ತಡೆ ನೀಡಿದ್ದು, ಮೇಲ್ಮನವಿ ನಿರ್ಧಾರವಾಗುವವರೆಗೆ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ರ ಅನ್ವಯ ಕಾರವಾರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಬಾರದು. ಸೈಲ್ ವಿಧಾನಸಭೆಯಲ್ಲಿ ಮತ ಚಲಾಯಿಸಲು ಅಥವಾ ಭತ್ಯೆ ಪಡೆಯಲು ಅರ್ಹರಲ್ಲ ಎಂದು ತಿಳಿಸಿದೆ. ಇದಲ್ಲದೆ ಮೇಲ್ಮನವಿ ಬಾಕಿ ಇರುವಾಗ ಮೇಲ್ಮನವಿದಾರರನ್ನು ಭವಿಷ್ಯದಲ್ಲಿ ನಡೆಯುವ ಚುನಾವಣೆಯಲ್ಲಿ ಭಾಗವಹಿಸದಂತೆ ಅನರ್ಹಗೊಳಿಸಬಾರದು ಎಂದು ಪೀಠ ಆದೇಶಿಸಿದೆ.