ಹನ್ನೇರಡನೇ ಶತಮಾನದಲ್ಲಿ ಬಸವಣ್ಣ ಅವರು ಸಾರಿದ ಕಾಯಕವೇ ಕೈಲಾಸ ಎಲ್ಲ ಕಾಲಕ್ಕೂ ಪ್ರಸ್ತುತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಭಿಪ್ರಾಯಿಸಿದರು.
ನಗರದಲ್ಲಿ ಭಾನುವಾರ ಆಯೋಜಿಸಿದ್ದ ನಮ್ಮ ಬಸವ ಜಯಂತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮೈಸೂರಲ್ಲಿ ಸಮಾಜದ ಮುಖಂಡರು ಲಿಂಗಾಯತ ಒಳಪಂಗಡಗಳ ಗೋಜಿಗೆ ಸಿಲುಕದೆ ಸಮಾಜದ ಒಳಿತಿನ ಕಡೆ ಸಾಗುತ್ತಿದ್ದಾರೆ. ಹಾಗಾಗಿ ಮೈಸೂರಿಗೆ ಬಂದಾಗಲೆಲ್ಲ ಪ್ರೇರಣೆ ಬರುತ್ತದೆ ಎಂದರು.
ವೀರಶೈವ ಲಿಂಗಾಯತ ಸಮಾಜ ಒಟ್ಟಾಗಿದ್ದರೆ ಸಮಾಜಕ್ಕೆ ನೆರಳಾಗುವ ಶಕ್ತಿ ಇದೆ. ಆದರೆ ಸಮಾಜದ ಒಳ್ಳೆಯತನ, ತಮ್ಮ ಮೌನ ಶಾಪವಾಗಿ ಪರಿಣಮಿಸಿದೆ. ಉತ್ತಮ ಶಿಕ್ಷಣ ದೊರೆತರೂ ಸಂಸ್ಕಾರ ಕೊಡುವಲ್ಲಿ ಎಡವಿದ್ದೇವೆ. ಆಧುನಿಕ ತಂತ್ರಜ್ಞಾನದ ಭರಾಟೆಯಿಂದ ನಮ್ಮ ಪರಂಪರೆ ಸಂಸ್ಕೃತಿ ಮರೆಯುತ್ತಿದ್ದೇವೆ. ಮನುಷ್ಯತ್ವ ಕಳೆದುಕೊಳ್ಳುತ್ತಿದೇವೆ ಎಂದರು.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಜಗತ್ತಿನ ಇತಿಹಾಸವನ್ನು ಅವಲೋಕಿಸಿದರೆ ಸಂಪತ್ತು, ಹೆಣ್ಣು, ಅಧಿಕಾರ, ಮಣ್ಣಿಗಾಗಿ ಕ್ರಾಂತಿಗಳಾಗಿವೆ. ಸರ್ವ ಸಮಾನತೆಗಾಗಿ ಜಗತ್ತಿನಲ್ಲಿ ಕಲ್ಯಾಣ ಕ್ರಾಂತಿ ಮಾಡಿದ್ದು ಬಸವಾದಿ ಶರಣರು. ಆ ಕಾಲದಲ್ಲಿ ಅಂಧಕಾರ, ಮೌಢ್ಯ ತುಂಬಿತ್ತು. ಜನ ಕಷ್ಟದಲ್ಲಿದ್ದರು. ಸ್ವಾತಂತ್ರೃ, ಸಮಾನತೆ, ಸಹೋದರತೆ, ಸಹಬಾಳ್ವೆಗಾಗಿ ವರ್ಗರಹಿತ, ವರ್ಣರಹಿತ, ಜಾತಿ ರಹಿತ ಸಮಾಜಕ್ಕಾಗಿ ಶರಣರು ಹೋರಾಟ ಮಾಡಿದರು. ಇಂಗ್ಲೆಂಡಿನಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆ ಬರುವ ಮುನ್ನವೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆ ಕೊಟ್ಟವರು ಬಸವಣ್ಣ. ಆ ಕಾಲದಲ್ಲಿಯೇ ಮಹಿಳೆಯರಿಗೂ ಸ್ವಾತಂತ್ರೃ ದೊರೆಯಿತು ಎಂದು ಹೇಳಿದರು.
ಶರಣರು ಸಕಲರಿಗೂ ಲೇಸನ್ನು ಬಯಸಿದರು. ದಯವೇ ಧರ್ಮದ ಮೂಲವಯ್ಯ ಎಂದು ಸಾರಿದರು. ಇಂದು ಧರ್ಮದ ಹೆಸರಿನಲ್ಲಿ ಭಯದ ವಾತಾವರಣ ಇದೆ. ಭಾವನಾತ್ಮಕ ವಿಷಯಗಳನ್ನು ಕೆರಳಿಸಲಾಗುತ್ತಿದೆ. ಜಗತ್ತಿನ ಎಲ್ಲ ಕಡೆ ಆತಂಕ ಇದೆ. ಭಾರತ -ಪಾಕಿಸ್ತಾನ ಯುದ್ಧವಾಯಿತು. ವಿಜ್ಞಾನ-ತಂತ್ರಜ್ಞಾನ ಬೆಳೆದಿದೆ. ವೈಜ್ಞಾನಿಕವಾಗಿ ನಾವೆಲ್ಲರೂ ಮುಂದುವರಿದಿದ್ದೇವೆ. ಆದರೆ ಜಗತ್ತಿನಲ್ಲಿ ಶಾಂತಿ-ಸಮಾಧಾನವೇ ಇಲ್ಲವಾಗಿದೆ. ಮಾನಸಿಕ ದೌರ್ಬಲ್ಯ ಆವರಿಸಿಕೊಂಡಿದೆ. ಹಿಂಸೆ, ಅಸಹಿಷ್ಣುತೆ ತಾಂಡವಾಡುತ್ತಿದೆ. ಇದಕ್ಕೆ ಪರಿಹಾರ ಬಸವ ತತ್ವದಲ್ಲಿದೆ ಎಂದರು.
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತ ಆರ್ಥಿಕವಾಗಿ ಮುಂದಿದೆ. ಆಪರೇಷನ್ ಸಿಂಧೂರದ ಮೂಲಕ ಜಗತ್ತಿಗೆ ತನ್ನ ಸಾಮರ್ಥ್ಯ ತೋರಿದೆ. ನಮ್ಮ ಮಿಲಿಟಿರಿ ಸೂಪರ್ ಪವರ್. ಆದರೂ ಭಾರತವನ್ನು ಸಂಸ್ಕೃತಿ, ಪರಂಪರೆಯಿಂದ ಗುರಿತಿಸುವುದಕ್ಕೆ ಬಸವಣ್ಣ ಕೊಡುಗೆ ಇದೆ. ವಿಕಸಿತ ಭಾರತಕ್ಕೆ ಗುರು ಬಸವಣ್ಣ ಬೋಧನೆ ಮುಖ್ಯ ಎಂದರು.
ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಸಾಲೂರು ಮಠದ ಶ್ರೀ ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಟಿ.ಎಸ್. ಶ್ರೀವತ್ಸ ಇದ್ದರು.