ಎನ್.ಆರ್.ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ವೇದಿಕೆಗಳನ್ನು ಪ್ರಶಾಂತ್ ಎಲ್. ಶೆಟ್ಟಿ ಉದ್ಘಾಟಿಸಿದರು. ಎಂ.ಜಿ.ನಾಗರಾಜ್, ಬಿನು ಜೋಸೆಫ್, ಶಿಲ್ಪಾ, ಜೆ.ಎಸ್.ಶಂಕರನಾಯ್ಕ ಇತರರಿದ್ದರು.  
ನ್ಯೂಸ್

ಕಾಯಕದಲ್ಲಿ ಶ್ರದ್ಧೆ ಇದ್ದಲ್ಲಿ ಉಜ್ವಲ ಭವಿಷ್ಯ

ಎನ್.ಆರ್.ಪುರ: ಪದವಿ ಹಂತದಲ್ಲಿ ಸರಿಯಾದ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಚಾರ್ಯ ಎಂ.ಜಿ.ನಾಗರಾಜ್ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಐಕ್ಯೂಎಸಿ, ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ರೋವರ್ಸ್ ಮತ್ತು ರೇಂಜರ್ಸ್ ಹಾಗೂ ವಿವಿಧ ವೇದಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಂಸ್ಕೃತಿಕ, ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳು ಸಮುದಾಯದ ಜತೆ ಬೆಸೆಯುತ್ತವೆ. ಯುವಜನಾಂಗದಿಂದ ಸದೃಢ ದೇಶ ಕಟ್ಟಲು ಸಾಧ್ಯ. ಕಾಯಕವನ್ನು ಸರಿಯಾಗಿ ಮಾಡಿದರೆ ಯಶಸ್ಸು ಸಾಧಿಸಬಹುದು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ತಂದೆ, ತಾಯಿ ಮಕ್ಕಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕಾಲೇಜಿಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರಯತ್ನಿಸಬೇಕು. ಸೇವಾ ಮನೋಭಾವನೆ, ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿ ಸಹಕಾರ ನೀಡಲಾಗುವುದು. ಕಾಲೇಜು ಮುಂಭಾಗದಿಂದ ಪಟ್ಟಣದವರೆಗೆ ರಸ್ತೆ ವಿಸ್ತರಣೆಗೆ ಶಾಸಕರ ಸಹಕಾರದಿಂದ ಲೋಕೋಪಯೋಗಿ ಸಚಿವರು 54 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಜಿಪಂ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ. ಧನಂಜಯ ಮಾತನಾಡಿ, ವಿದ್ಯಾರ್ಥಿಗಳು ಮಹಾತ್ಮರ ಚರಿತ್ರೆ ಹಾಗೂ ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.

ಮೆಣಸೂರು ಗ್ರಾಪಂ ಸದಸ್ಯರಾದ ಬಿನು ಜೋಸೆಫ್, ಶಿಲ್ಪಾ ಅನಿಲ್, ಸಾಂಸ್ಕೃತಿಕ ವೇದಿಕೆ ಸಂಚಾಲಕ ಜೆ.ಎಸ್.ಶಂಕರನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಕಿರಣ್, ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ, ವಿದ್ಯಾರ್ಥಿಗಳಾದ ಸಾನಿಯಾ, ಸ್ಫೂರ್ತಿ ಇದ್ದರು.