ಪ್ರಶ್ನೆ: ನನ್ನ ಮಾವನಿಗೆ ನಾಲ್ಕು ಗಂಡು ಮಕ್ಕಳು, ಒಂದು ಹೆಣ್ಣು ಮಗಳು. ನನ್ನ ಗಂಡ ಮೊದಲನೇ ಮಗ. ನನ್ನ ಗಂಡನಿಗೆ ಮಾವನಿಗೆ ಜಗಳವಾಗಿದೆ, ಮನೆಯಿಂದ ನಮ್ಮನ್ನು ಹೊರಹಾಕಿದ್ದಾರೆ, ಮತ್ತು ಉಳಿದ ಮಕ್ಕಳಿಗೆ ಆಸ್ತಿಯನ್ನು ಬರೆದಿಟ್ಟು ತೀರಿಕೊಂಡರು. ನನ್ನ ಅತ್ತೆಯೂ ತೀರಿಹೋಗಿರುತ್ತಾರೆ. ಮಾವನ ಸ್ವಯಾರ್ಜಿತ ಆಸ್ತಿಯಾದ್ದರಿಂದ ನಮಗೆ ಭಾಗ ದೊರೆಯಲು ಸಾಧ್ಯವೇ? ನಮಗೆ ಒಬ್ಬನೇ ಮಗ, 15 ವರ್ಷ ವಯಸ್ಸು. ನನ್ನ ಗಂಡ ಮನೆಕಟ್ಟುವಾಗ ನನ್ನ ಮಾವನಿಗೆ ಹಣ ಕೊಟ್ಟಿದ್ದು ಅದಕ್ಕೆ ಯಾವುದೇ ಸಾಕ್ಷಿ ನಮ್ಮಲ್ಲಿ ಇಲ್ಲ.
ಉತ್ತರ: ಯಾವುದೇ ವ್ಯಕ್ತಿ ತನ್ನ ಸ್ವಯಾರ್ಜಿತ ಸ್ವತ್ತನ್ನು ತನ್ನ ಜೀವಿತಕಾಲದಲ್ಲಿ ಯಾರಿಗೆ ಬೇಕಾದರೂ ಯಾವ ರೀತಿಯಲ್ಲಿ ಬೇಕಾದರೂ, ಪರಭಾರೆ ಅಥವಾ ವಿಲೇವಾರಿ ಮಾಡಬಹುದು. ಹೀಗಾಗಿ ನಿಮ್ಮ ಮಾವ ತನ್ನ ಸ್ವಯಾರ್ಜಿತ ಆಸ್ತಿಯನ್ನು ಅವರ ಉಳಿದ ಮಕ್ಕಳಿಗೆ ಬರೆದಿಟ್ಟು ತೀರಿಕೊಂಡಿರುತ್ತಾರೆ, ನಿಮ್ಮ ಪತಿಗಾಗಲೀ ನಿಮ್ಮ ಮಗನಿಗಾಗಲೀ ಈ ಆಸ್ತಿಯಲ್ಲಿ ಯಾವ ಹಕ್ಕು ಬರುವುದಿಲ್ಲ.
ಯಾರಿಗಾದರೂ ಹಣ ಕೊಟ್ಟರೆ ಅದನ್ನು ವಾಪಸ್ ಪಡೆಯಲು ಮೂರು ವರ್ಷಗಳ ಕಾಲಾವಧಿ ಇರುತ್ತದೆ. ನಿಮ್ಮ ಮಾವನಿಗೆ ನಿಮ್ಮ ಪತಿ ಹಣ ಕೊಟ್ಟ ಬಗ್ಗೆ ದಾಖಲೆಯೂ ಇಲ್ಲದೇ ಇರುವುದರಿಂದ ಹಣ ವಾಪಸಾತಿಗೆ ನಿಮ್ಮ ಮಾವನ ಉಳಿದ ವಾರಸುದಾರರ ಮೇಲೆ ಕೇಸು ಹಾಕಿದರೆ ಗೆಲ್ಲುವ ಸಾಧ್ಯತೆ ಕಡಿಮೆ.
ಆದರೆ ಒಂದು ವೇಳೆ ವಿಲ್ ಸಂಶಯಾತ್ಮಕ ಸನ್ನಿವೇಶದಲ್ಲಿ ಸೃಷ್ಟಿ ಆಗಿರುವುದು ಎಂದಾದರೆ, ನಿಮ್ಮ ಪತಿ ಆ ಮರಣ ಶಾಸನದ ಸಿಂಧುತ್ವವನ್ನು ಪ್ರಶ್ನಿಸಿ ತನ್ನ ಭಾಗವನ್ನು ಕೇಳಿ ವಿಭಾಗದ ದಾವೆ ಹಾಕಬಹುದು. ವಿಲ್ ಬರೆಸುವಾಗ ನಿಮ್ಮ ಮಾವನವರು ನಿಮ್ಮ ಪತಿಗೆ ಏಕೆ ಯಾವ ಆಸ್ತಿಯನ್ನೂ ಕೊಟ್ಟಿಲ್ಲ ಎನ್ನುವುದನ್ನು ನಮೂದಿಸಿದ್ದಾರೋ ಇಲ್ಲವೋ ಅನ್ನುವುದೂ ಒಂದು ಮುಖ್ಯ ಅಂಶವಾಗುತ್ತದೆ. ನೀವು ವಿಲ್ ಕಾಪಿಯನ್ನು ವಕೀಲರಿಗೆ ತೋರಿಸಿ ಹೆಚ್ಚಿನ ಸಲಹೆ ಪಡೆಯಿರಿ.
(ಅಂಕಣಕಾರರು ಹಿರಿಯ ವಕೀಲೆ ಹಾಗೂ ಮಧ್ಯಸ್ಥಿಕೆದಾರರು)
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)