ನ್ಯೂಸ್

ಕಾನೂನು ಸಲಹಾ ಸಮಿತಿ ಜೊತೆ ಚರ್ಚಿಸಿ ತೀರ್ಮಾನ: ಸಿಎಂ

ಮೈಸೂರು: ತಮಿಳುನಾಡಿಗೆ ನೀರು ಹರಿಸುವ ಸಂಬಂಧ ಬಂದಿರುವ ಆದೇಶ ಕುರಿತು ಕಾನೂನು ಸಲಹಾ ಸಮಿತಿ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ಹಂಚಿಕೆ ಪ್ರಾಧಿಕಾರ ಆದೇಶ ನೀಡಿದೆ. ಈ ಬಗ್ಗೆ ಕಾನೂನು ಸಲಹಾ ಸಮಿತಿ ಜೊತೆಗೆ ಸಾಧಕ-ಬಾಧಕ ಕುರಿತು ಚರ್ಚಿಸಲಾಗುವುದು ಎಂದು ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಈ ಮೊದಲು 15 ದಿನಗಳವರಗೆ ನೀರು ಹರಿಸುವಂತೆ ಪ್ರಾಧಿಕಾರ ಹೇಳಿತ್ತು. ಹಿಂದಿನ ಸಭೆಯಲ್ಲಿ ಹತ್ತು ಸಾವಿರ ಬಿಡುವಂತೆ ತಿಳಿಸಿದ್ದರು. ಆ.31 ರವರಗೆ 86 ಟಿಎಂಸಿ ನೀರು ನೀಡಬೇಕಿತ್ತು. ಆದರೆ ಈವರಗೆ 30 ಟಿಎಂಸಿ ಮಾತ್ರ ನೀಡಿದ್ದೇವೆ ಎಂದರು
ಪ್ರತಿದಿನ 24 ಸಾವಿರ ಕ್ಯೂಸೆಕ್ ನೀರು ನೀಡುವಂತೆ ತಮಿಳುನಾಡಿನವರು ವಾದಿಸಿದ್ದಾರೆ. ನಾವು ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದ್ದೇವೆ. ನಾವು ಲೀಗಲ್ ಟೀಂ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ನೀರಾವರಿ ಇಲಾಖೆ ಜೊತೆ ಮಾತನಾಡಿ ಸಂಕಷ್ಟ ಸೂತ್ರ ಅನುಸರಿಸುವಂತೆ ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.
ಸರಿಯಾಗಿ ಮಳೆ ಬೀಳದ ಕಾರಣ ನಮ್ಮ ಬಳಿಯೇ ಸೂಕ್ತ ಪ್ರಮಾಣದ ನೀರಿಲ್ಲ. ನಮಗೆ ಕುಡಿಯುವ ನೀರಿನ ತೀರ್ಮಾನ ಮಾಡಬೇಕು. ಬೆಳಗಳ ಪರಿಸ್ಥಿತಿ ನೋಡಿಕೊಳ್ಳಬೇಕಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸಚಿವರು, ಡಿಸಿಎಂ ಡಿ.ಕೆ.ಶಿವಕುಮಾರ್ ಜೊತೆ ಚರ್ಚಿಸುವೆ. ನಾವು ನ್ಯಾಯಾಲಯಕ್ಕೆ ಹೋಗಬೇಕಾ ಇಲ್ಲವೇ ಏನು ಪರಿಹಾರ ಕಂಡುಕೊಳ್ಳಬಹುದು ಎಂದು ಚರ್ಚಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.