ನ್ಯೂಸ್

ಕಾನೂನು ಅಧ್ಯಯನಕ್ಕೆ ಹೆಚ್ಚು ಮಹತ್ವ

ಕಾನೂನು ಓದು ಮತ್ತು ವಕೀಲಿ ವೃತ್ತಿ ಹಗುರವಾಗಿ ಪರಿಗಣಿಸುವ ವೃತ್ತಿಯಲ್ಲ. ಈ ಹಿಂದೆ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಇದ್ದ ಮಹತ್ವ ಈಗ ಕಾನೂನು ಕೋರ್ಸ್‌ಗಳಿಗೂ ಸಿಕ್ಕಿದೆ ಎಂದು ಮೈಸೂರಿನ ಕೌಟುಂಬಿಕ ನ್ಯಾಯಾಲಯದ ಮೂರನೇ ಹೆಚ್ಚುವರಿ ಪ್ರಧಾನ ನ್ಯಾಯಾಧೀಶ ಎಸ್.ಬಿ.ಕೆಂಭಾವಿ ಹೇಳಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಕಾಸ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿ.ಇ., ಎಂಬಿಎ ಪದವಿ ಪಡೆದವರು ಕಾನೂನು ಪದವಿ ಕಲಿಕೆಯತ್ತ ಆಸಕ್ತಿ ತೋರುತ್ತಿರುವುದು ಆರೋಗ್ಯಕರ ಬೆಳವಣಿಯಾಗಿದೆ. ಇವತ್ತು ಪ್ರತಿಯೊಬ್ಬರಿಗೂ ಕಾನೂನು ಓದಿನ ಮಹತ್ವದ ಕುರಿತು ಅರಿವಾಗುತ್ತಿದೆ. ಒಂದು ಕಾಲದಲ್ಲಿ ಅಸಡ್ಡೆಯಿಂದ ನೋಡುತ್ತಿದ್ದ ಇದೇ ಕಾನೂನು ವ್ಯಾಸಂಗವನ್ನು ಈಗ ಎಲ್ಲರೂ ಅತೀವ್ರ ಆಸಕ್ತಿಯಿಂದ ಓದುತ್ತಿರುವುದು ನಿಜಕ್ಕೂ ಮೆಚ್ಚುವಂತಹ ವಿಚಾರವೇ ಸರಿ ಎಂದರು.

ವಿದ್ಯಾರ್ಥಿಗಳು ತರಗತಿಗಳಿಗಷ್ಟೇ ಸೀಮಿತವಾಗದೆ, ಕಾನೂನು ಗ್ರಂಥಾಲಯ, ಕಾನೂನು ಶಿಕ್ಷಕರು, ಕಾನೂನು ಪುಸ್ತಕಗಳನ್ನು, ತರಗತಿಯಲ್ಲಿ ಮಾಡಿಕೊಂಡ ಟಿಪ್ಪಣಿಗಳು ನಿಮಗೆ ಕಾನೂನು ಓದು ಕಬ್ಬಿಣದ ಕಡಲೆಯಲ್ಲ ಎನ್ನುವಂತೆ ಮಾಡುತ್ತವೆ. ನ್ಯಾಯಶಾಸ್ತ್ರದಂತಹ ಕಠಿಣ ವಿಷಯಗಳು ಅರ್ಥವಾಗಬೇಕೆಂದರೆ ಸಾಲ್ಮಂಡ್ ಬರೆದ ನ್ಯಾಯಶಾಸ್ತ್ರದ ಪುಸ್ತಕವನ್ನೇ ಓದಬೇಕು. ಇನ್ನುಮುಂದೆ ನಿಮಗೆ ಸವಾಲಿನ ದಿನಗಳು ಎದುರಾಗಲಿವೆ. ಕೃತಕ ಬುದ್ಧಿಮತ್ತೆ ಮತ್ತು ಬೌದ್ಧಿಕ ಸ್ವತ್ತಿನ ಕಾನೂನು ವಿಷಯಗಳಿಗೆ ಜಾಗತಿಕವಾಗಿ ಹೆಚ್ಚಿನ ಮನ್ನಣೆ ದೊರಕಲಿವೆ. ಇಂಥ ವಿಷಯಗಳನ್ನು ಕಲಿಯುವುದರತ್ತ ಕಾನೂನು ವಿದ್ಯಾರ್ಥಿಗಳು ಮತ್ತು ಯುವ ವಕೀಲರು ತೀವ್ರವಾದ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಇಲ್ಲಿ ಯಾವ ಅಡ್ಡದಾರಿಗಳು ನಿಮ್ಮ ಓದಿಗೆ, ನಿಮ್ಮ ಪದವಿಗೆ, ನಿಮ್ಮ ಯಶಸ್ಸಿಗೆ ದಾರಿ ತೋರಲಾರವು ಎಂದು ಹೇಳಿದರು.

ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ ಮಾತನಾಡಿದರು. ಸಂಘದ ಕಾರ್ಯದರ್ಶಿ ಪಿ.ವಿಶ್ವನಾಥ್, ಸಂಘದ ಖಜಾಂಚಿ ಶ್ರೀಶೈಲ ರಾಮಣ್ಣವರ್, ವಿದ್ಯಾವರ್ಧಕ ಕಾನೂನು ಕಾಲೇಜಿನ ಕಾಲೇಜು ಮೇಲ್ವಿಚಾರಣಾ ಸಮಿತಿ ಮುಖ್ಯಸ್ಥ ಎಸ್.ಶಿವಲಿಂಗಯ್ಯ, ಪ್ರಾಂಶುಪಾಲ ಡಾ.ಪಿ.ದೀಪು, ಡಾ.ಶ್ರೀದೇವಿ ಕೃಷ್ಣ ಇದ್ದರು.